ಸಿದ್ದಾಪುರದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರ ನಡೆಸಿಕೊಟ್ಟ ತಂಡ.  
ಜಿಲ್ಲೆ

ನೆಲ್ಯಹುದಿಕೇರಿಯಲ್ಲಿ ಆರೋಗ್ಯ ತಪಾಸಣೆ

ವಸಂತಕುಮಾರ್ ಬಿ

ಸಿದ್ದಾಪುರ: ನಲ್ವತ್ತೇಕರೆ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಸುಳ್ಯ ಕೆವಿಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಸಾರ್ವಜನಿಕರಿಗೆ ಭಾನುವಾರ ಆರೋಗ್ಯ ತಪಾಸಣೆ, ಮಾಹಿತಿ ಕಾರ್ಯಗಾರ, ಉಚಿತ ಔಷಧ ವಿತರಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಭಾನುವಾರ ನೆಲ್ಯಹುದಿಕೇರಿ ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಬಿರದ ಕಾರ್ಯಕ್ರಮವನ್ನು ಸ್ವರ್ಣಾ ಕ್ಲಿನಿಕ್‌ನ ಡಾ.ಉದಯ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಬಡವರ, ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಹೆಚ್ಚು ಉಪಯುಕ್ತಾವಾಗಲಿವೆ. ಜನರು ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ರೋಗ, ಇಎನ್‌ಟಿ, ಕಣ್ಣಿನ ಚಿಕಿತ್ಸೆ, ಚರ್ಮ ಮತ್ತು ಲೈಂಗಿಕ ರೋಗ, ಎಲುಬು ಮತ್ತು ಕೀಲು ರೋಗ, ದಂತ ಚಿಕಿತ್ಸೆ, ಶ್ವಾಸಕೋಶ ಹಾಗೂ ತುರ್ತು ಚಿಕಿತ್ಸೆ ವಿಬಾಗ ಸೇರಿದಂತೆ ನುರಿತ 15 ವೈದ್ಯರು ಪಾಲ್ಗೊಂಡಿದ್ದರು. ತಪಾಸಣೆ ನಡೆಸಿ ರೋಗಿಗಳಿಗೆ ಉಚಿತವಾಗಿ ಔಷಧ ವಿತರಿಸಲಾಯಿತು.

ಸಿದ್ದಾಪುರದ ಹಿರಿಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು. ಇದೇ ವೇಳೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿದರು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಕಾರ್ಮಿಕ ಮುಖಂಡರಾದ ಬಿ.ಆರ್.ಭರತ್, ಅಂಬೇಡ್ಕರ್ ಸಮಿತಿಯ ಸತೀಶ್, ಹಾಗೂ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ಮಣಿ, ಕಾರ್ಯದರ್ಶಿ ಎಚ್.ಬಿ.ಅಕ್ಷಯ್, ಸದಸ್ಯರಾದ ಟಿ.ಕೆ.ಮನೋಜ್, ಕೆ.ವಿ.ಪ್ರಭಾಕರ್ ಮತ್ತು ಎ.ಬಿ.ಸತೀಶ್ ಮತ್ತಿತರರಿದ್ದರು.