ಜಿಲ್ಲೆ

ಟಾಂಗಾ ಕುದುರೆಗಳಿಗೆ ಆರೋಗ್ಯ ತಪಾಸಣೆ

reportermys


ಮೈಸೂರು:
ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ ವತಿಯಿಂದ ನಗರದ ಟಾಂಗಾ ಕುದುರೆಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಲಾಯಿತು.


ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು 20 ಕುದುರೆಗಳಿಗೆ ಆರೋಗ್ಯ ತಪಾಸಣೆ ನಡೆಸಿದರು. ಜತೆಗೆ ಔಷಧಗಳನ್ನು ನೀಡಲಾಯಿತು. ಗಾಯಗೊಂಡಿದ್ದ ಕುದುರೆಗಳಿಗೆ ಉಪಚರಿಸಲಾಯಿತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾದೇವಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುದುರೆಗಳಿಗೆ ಔಷಧ ವಿತರಿಸಿದರು.


ಸ್ವಯಂ ಸೇವಕಿ ಭಾಗ್ಯಲಕ್ಷ್ಮೀ ಮಾತನಾಡಿ, ಈ ಭೂಮಿಯಲ್ಲಿ ಮನುಷ್ಯನಷ್ಟೇ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಹಾಗಾಗಿ ಟಾಂಗಾ ಮಾಲೀಕರು ಕುದುರೆಗಳಿಗೆ ಹೊಡೆಯಬಾರದು. ನಿಯಮಿತವಾಗಿ ತಪಾಸಣೆ ಮಾಡಿಸಬೇಕು. ಇದೊಂದು ಸಾಮಾಜಿಕ ಕಳಕಳಿಯ ಸೇವೆಯಾಗಿದ್ದು, ಟಾಂಗಾ ಕುದುರೆ ಮಾಲೀಕರಿಗೆ ಮತ್ತು ಕುಟುಂಬದವರಿಗೆ ಅರಿವು ಮೂಡಿಸುವುದಾಗಿದೆ ಎಂದರು.
ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ನಾಗಭೂಷಣ್, ಜೀವದಯಾ ಜೈನ್ ಚಾರಿಟಿಯ ಕೋಕಿಲ ಜೈನ್, ಪಶುವೈದ್ಯ ಡಾ.ಅಮರ್‌ದೀಪ್ ಸಿಂಗ್ ಇತರರಿದ್ದರು.