ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಅಸ್ವಸ್ಥರ ಕುಟುಂಬಕ್ಕೆ ಸಿಡಿಪಿಒ ನಂಜಮ್ಮಣಿ ಹೊದಿಕೆ ವಿತರಿಸಿದರು. 
ಜಿಲ್ಲೆ

ಆಸ್ಪತ್ರೆಗೆ ದಾಖಲಾಗಿದ್ದವರ ಆರೋಗ್ಯ ವಿಚಾರಣೆ

ಕೊಳ್ಳೇಗಾಲ: ವಿಷಪೂರಿತ ಮರಳಕಾಯಿ ಸೇವಿಸಿ ಅಸ್ವಸ್ಥರಾಗಿ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಗುರುವಾರ ಉಪವಿಭಾಗಾಧಿಕಾರಿ ಮಹೇಶ್ ಕುಮಾರ್, ಬಿಇಒ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಸಿಡಿಪಿಒ ನಂಜಮ್ಮಣಿ ಹಾಗೂ ಬಂಜಾರ ಅಕಾಡೆಮಿ ರಾಜ್ಯ ಸದಸ್ಯ ಪಳನಿ ಸ್ವಾಮಿ ಜಾಗೇರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡದ 9 ಕುಟುಂಬ ಕಬ್ಬು ಕಟಾವು ಮಾಡಲು ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ತಂಗಿದ್ದರು. ಈ ವೇಳೆ ಬೇಲಿಯಲ್ಲಿ ಬೆಳೆದಿದ್ದ ಮರಳಕಾಯಿ ತಿಂದು 8 ಮಕ್ಕಳು ಸೇರಿದಂತೆ 13 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 4 ವರ್ಷದ ಮಗು ಯುವರಾಜ್ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕರೆದೊಯ್ಯಲಾಗಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು ಹಾಗೂ ಅವರ ಕುಟುಂಬದವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ವ್ಯೆದ್ಯರಿಂದ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.

ಕಬ್ಬು ಕಟಾವು ಕೆಲಸಕ್ಕೆ ಬಂದಿರುವ ಗುಂಪಿನಲ್ಲಿರುವ ಮಕ್ಕಳಿಗೆ ಸ್ಥಳೀಯ ಶಾಲೆಗಳಿಗೆ ತಾತ್ಕಾಲಿಕವಾಗಿ ಹಾಜರಾಗಲು ಮಂಜುಳಾ ವರು ಕ್ರಮವಹಿಸಿದ್ದು ಬಿಆರ್‌ಸಿ ಮಹದೇವು ಅವರಿಗೆ ಸೂಚನೆ ನೀಡಿದ್ದಾರೆ. ಸಿಡಿಪಿಒ ನಂಜಮ್ಮಣಿ ಅವರು ಹೊದಿಕೆ ಹಾಗೂ ಸೀರೆಗಳನ್ನು ವಿತರಣೆ ಮಾಡಿದರು. ಬಂಜಾರ ಅಕಾಡೆಮಿ ರಾಜ್ಯ ಸದಸ್ಯ ಪಳನಿಸ್ವಾಮಿ ಜಾಗೇರಿ ಅವರು ಬ್ಯಾಗ್ ಹಾಗೂ ಪುಸ್ತಕಗಳನ್ನು ಮಕ್ಕಳಿಗೆ ನೀಡಿದರು. ಬಿಆರ್‌ಸಿ ಮಹದೇವ ಅವರು ಮಕ್ಕಳಿಗೆ ಬಟ್ಟೆ ಹಾಗೂ ಪಠ್ಯ ಪುಸ್ತ ಕವನ್ನು ನೀಡಿದ್ದಾರೆ.

ಸಿಡಿಪಿಒ ನಂಜಮ್ಮಣಿ ವಿಜಯವಾಣಿಯೊಂದಿಗೆ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಕೂಲಿ ಕೆಲಸಕ್ಕೆ ಆಗಮಿಸಿರುವ ಇಂತಹ ಕುಟುಂಬಗಳನ್ನು ಗುರುತಿಸಿ ಅವರೊಂದಿಗಿರುವ ಮಕ್ಕಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಹಾಜರುಪಡಿಸಿ ತಿಂಡಿ, ಆಹಾರ ನೀಡುವ ಸಂಬಂಧ ಕ್ರಮವ ಹಿಸಲಾಗುವುದು ಎಂದು ತಿಳಿಸಿದರು.