ಯಳಂದೂರು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆಗೆ ಕರೆದೊಯ್ಯುವ ವಾಹನಕ್ಕೆ ಚಾಲನೆ ನೀಡಲಾಯಿತು. 
ಜಿಲ್ಲೆ

ಪೌರಕಾರ್ಮಿಕರಿಗೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆ

ಯಳಂದೂರು: ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲು ಗುರುವಾರ ಕರೆದೊಯ್ಯಲಾಯಿತು.

ಉಚಿತವಾಗಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡುವಂತೆ ಸರ್ಕಾರದ ನಿರ್ದೇಶನವಿದೆ. ಇದರ ವೆಚ್ಚವನ್ನು ಸಂಪೂರ್ಣವಾಗಿ ಇಲ್ಲಿನ ಸ್ಥಳೀಯ ಸಂಸ್ಥೆಗಳೇ ಭರಿಸಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಪೌರ ಕಾರ್ಮಿಕರನ್ನು ಗುರುವಾರ ಮೈಸೂರಿನಲ್ಲಿರುವ ಅಪೋಲೊ ಆಸ್ಪತ್ರೆಗೆ ಟಿಟಿ ವಾಹನದಲ್ಲಿ ಪಂಚಾಯಿತಿ ನೌಕರರ ಜತೆಗೂಡಿ ಕರೆದೊಯ್ಯಲಾಯಿತು.

ವಾಹನಕ್ಕೆ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಚಾಲನೆ ನೀಡಿ ಮಾತನಾಡಿ, ಪೌರ ಕಾರ್ಮಿಕರಿಲ್ಲದೆ ಪಟ್ಟಣದ ಸ್ವಚ್ಛತೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ನಿತ್ಯ ಇವರು ಮಾಡುವ ಕಾಯಕದಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿ ವಹಿಸಬೇಕಿರುತ್ತದೆ. ಇವರಿಗೆ ಪಂಚಾಯಿತಿ ವತಿಯಿಂದ ಗ್ಲೌಸ್, ಗಮ್ ಬೂಟ್, ಜಾಕೆಟ್, ಹೆಲ್ಮೆಟ್ ಸೇರಿದಂತೆ ಇತರ ಪರಿಕರಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕೆಂದು ಸೂಚನೆಯನ್ನೂ ನೀಡುತ್ತಿದ್ದೇವೆ. ಅಲ್ಲದೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಸರ್ಕಾರದ ನಿರ್ದೇಶನದಂತೆ ಪಂಚಾಯಿತಿಯ ಖರ್ಚಿನಲ್ಲಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಲಾಗುತ್ತದೆ. ಏನಾದರೂ ತೊಂದರೆ ಇದ್ದಲ್ಲಿ ಅದಕ್ಕೆ ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಹಾಗಾಗಿ ಈ ತಪಾಸಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಒಂದು ವೇಳೆ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದರೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರಿ ನೌಕರರಾಗಿರುವುದರಿಂದ ಚಿಕಿತ್ಸಾ ವೆಚ್ಚ ಬಿಲ್ ಪಾವತಿ ಮಾಡಿದ ನಂತರ ಸರ್ಕಾರದ ವತಿಯಿಂದಲೇ ಪಾವತಿಯಾಗುತ್ತದೆ ಎಂದು ಮಾಹಿತಿ ನೀಡಿದರು.

ಪಪಂನ ಮಲ್ಲಿಕಾರ್ಜುನ, ಆಮಾಸೆ, ನಾಗರಾಜು, ಸುರೇಶ, ಆರ್ಯಮ್ಮ, ಸುಕನ್ಯಾ, ಶೋಭಾ, ಶಾಂತಿ, ರಂಗಸ್ವಾಮಿ, ಮುರುಗೇಶ, ರಾಮ ಇತರರಿದ್ದರು.