ಗುರುಪುರ: ಸೆ.23ರಂದು ಆಯುಷ್ ದಿನಾಚರಣೆ ಹಿನ್ನೆಲೆಯಲ್ಲಿ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬರು ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ದಿನದಲ್ಲಿ ಒಂದಷ್ಟು ಸಮಯ ಯೋಗ, ಧ್ಯಾನಕ್ಕೆ ಮೀಸಲಿಡಬೇಕು. ಮನಸ್ಸಿನ ರೋಗಕ್ಕೆ ಚಿಕಿತ್ಸೆ ಅವಶ್ಯ. ಮಾನಸಿಕ ದೃಢತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶ್ರೀದೇವಿ ಹೇಳಿದರು.
ಜಿಲ್ಲಾಡಳಿತ, ದ.ಕ. ಜಿಪಂ ಆಯುಷ್ ಇಲಾಖೆ, ಆಯುಷ್ಮಾನ್ ಆರೋಗ್ಯ ಮಂದಿರ(ಆಯುಷ್), ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ ಗುರುಪುರ ಆಶ್ರಯದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಮಂಗಳವಾರ ಗುರುಪುರದ ಹೋಮಿಯೋಪತಿ ಚಿಕಿತ್ಸಾಲಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆಯುಷ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಅಡ್ಡೂರಿನ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಿಎಚ್‌ಒ ಡೇಸಿ ಇಮ್ಯಾನುವಲ್ ಮಾತನಾಡಿದರು. ಮೂಡುಬಿದಿರೆ ಆಳ್ವಾಸ್ ಹೋಮಿಯೋಪತಿ ಕಾಲೇಜು ಕಲಿಕಾ ವೈದ್ಯ ರಾಜಶೇಖರ್, ಹೋಮಿಯೋಪತಿ, ಆಯುರ್ವೇದ, ಯುನಾನಿ, ಆಯುಷ್ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಚಿಕಿತ್ಸಾಲಯದ ಸಿಬ್ಬಂದಿ ಹರ್ಷಿತಾ ಹಿರಿಯ ನಾಗರಿಕರಿಗೆ ಆರೋಗ್ಯ ಸುರಕ್ಷತೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ತುಳಸಿ ಮತ್ತು ಶೋಭಾ ಡಿ.ನಡುಗುಡ್ಡೆ ಸಹಕರಿಸಿದರು.