ಜಿಲ್ಲೆ

ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಮಹತ್ವದ ಪಾತ್ರ : ಡಾ.ಕೃಷ್ಣ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದ್ದು, ಉತ್ತಮ ಪೋಷಕಾಂಶ ಆಹಾರಗಳ ಮೂಲಕ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ಮೂಲ್ಕಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಕ್ಕಳ ತಜ್ಞ ಡಾ.ಕೃಷ್ಣ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮಂಗಳೂರು ಅದಾನಿ ಫೌಂಡೇಶನ್ ವತಿಯಿಂದ ಮೂಲ್ಕಿ ತಾಲೂಕಿನ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ ಈ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಅದಾನಿ ಫೌಂಡೇಶನ್ ಸುಪೋಷನ್ ಅಧಿಕಾರಿ ಡಾ.ಪ್ರೇಮ ಡಿಸೋಜ ಅವರು ಪೌಷ್ಟಿಕಾಂಶ ಮತ್ತು ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ಸುಮಾರು 15 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು ಮತ್ತು ಅವರಿಗೆ ಅಗತ್ಯವಾದ ಔಷಧಿ ಹಾಗೂ ಪೋಷಣಾ ಸಾಮಗ್ರಿ ನೀಡಲಾಯಿತು.

ಅದಾನಿ ಫೌಂಡೇಶನ್ ಸಹಾಯಕ ಸುಪೋಷನ್ ಅಧಿಕಾರಿ ಚೈತ್ರ, ಲವ್ಲಿ ರೋಷ್ನಿ ಡಿಸೋಜ, ಸುಪೋಷನ್ ಸಂಗಿಣಿಯರು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.