ಮೈಸೂರು: ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್‌ನಿಂದ ಮೈಸೂರು-ಬನ್ನೂರು ರಸ್ತೆ ಹಾರೋಹಳ್ಳಿ-ಬಿದರಗೂಡು ನಡುವೆ ಇರುವ ಶ್ರೀ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ರೈತರು ಮತ್ತು ರೈತ ಕುಟುಂಬದವರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶ್ರೀಅರ್ಜುನ ಅವಧೂತರ ಜ್ಞಾನ ಪ್ರಕಾಶೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ರೈತ ಸಮುದಾಯದವರಿಗೆ ಬಿ.ಪಿ., ಶುಗರ್, ಹೃದಯ, ನೇತ್ರ, ದಂತ, ಇಸಿಜಿ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಯನ್ನು ನಡೆಸಿ, ಉಚಿತವಾಗಿ ಔಷಧ ವಿತರಿಸಲಾಯಿತು.
ಶಿಬಿರಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ತಿನ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದವರಿಗೆ ಏರ್ಪಡಿಸಲಾಗಿರುವ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಶ್ಲಾಘನೀಯ ಕಾರ್ಯ ಎಂದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಎಲ್.ಎನ್.ಶೆಣೈ ಮಾತನಾಡಿ, ಇಂದು ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಸರಿದಾರಿಗೆ ತರುವ ಸಲುವಾಗಿ ಅವಧೂತರು ಯುವ ಜನೋತ್ಸವ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡಿದರು.
ಶ್ರೀಅರ್ಜುನ ಅವಧೂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೆಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಚಂದ್ರು, ಕಾವೇರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಬಿ.ಆರ್.ಚಂದ್ರಶೇಖರ್, ನರರೋಗ ತಜ್ಞ ಡಾ.ಸುಶ್ರುತ್‌ಗೌಡ , ಮೆಲ್ಲಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಶ್ರೀವಾಣಿ, ಉದ್ಯಮಿ ಕಾರ್ತಿಕ್, ಮಕ್ಕಳ ತಜ್ಞೆ ಡಾ.ಶೈಲಜಾ ಪ್ರಕಾಶ್ ಇತರರು ಇದ್ದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಕಾವೇರಿ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಜೆಎಸ್‌ಎಸ್ ಡೆಂಟಲ್ ಕಾಲೇಜು, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಕಾವೇರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕ್ಲಿಯರ್ ಮೆಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸಾಗರ್ ಫಾರ್ಮಸಿಟಿಕ್ಸ್, ಆರೋಗ್ಯ ಭಾರತಿ ಸೇರಿದಂತೆ ಇನ್ನಿತರ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿದ್ದರು.