ಜಿಲ್ಲೆ

ಬೀದಿ ಬದಿ ವ್ಯಾಪಾರಿಗಳಿಗೆ ತಪಾಸಣೆ

ಬೇಲೂರು : ಬೀದಿ ಬದಿ ವ್ಯಾಪಾರಿಗಳು ತಮ್ಮ ಕೆಲಸಗಳ ಒತ್ತಡದಲ್ಲಿ ತಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹಿಂದೆ ಬೀಳುತ್ತಾರೆ ಎಂಬ ಉದ್ದೇಶದಿಂದ ಪುರಸಭೆಯಿಂದಲೇ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಹೇಳಿದರು. ಪುರಸಭೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಮುದಾಯ ಆಧಾರಿತ ಎಚ್‌ಐವಿ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು. ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ಬೆಳಗ್ಗೆ ಹಣ್ಣು, ತರಕಾರಿ, ಸೊಪ್ಪು ಹಾಗೂ ಇತರ ವಸ್ತುಗಳನ್ನು ಕೊಳ್ಳಲು ಹೋಗುತ್ತಾರೆ. ಅಲ್ಲಿಂದ ಬಂದ ನಂತರ ಉಪಾಹಾರ ತಿಂದರೆ ಉಂಟು, ಇಲ್ಲದಿದ್ದರೆ ಇಲ್ಲ. ಹೀಗೆ ದಿನಗಳು ಸಾಗುತ್ತವೆ. ಆದರೆ ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯವನ್ನು ಕಾಪಾಡುವುದು ಸ್ಥಳೀಯ ಸಂಸ್ಥೆ, ಸಂಘಗಳ ಜವಾಬ್ದಾರಿ ಎಂದರು.
ಶಿಬಿರದಲ್ಲಿ ಪ್ರತಿಯೊಬ್ಬರಿಗೂ ರಕ್ತದೊತ್ತಡ, ಸಕ್ಕರೆ ಪ್ರಮಾಣ ಪರೀಕ್ಷೆ ಮತ್ತು ಎಚ್‌ಐವಿ ಹಾಗೂ ನೇತ್ರ ತಪಾಸಣೆ ಮಾಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಇಂದೂ, ಡಾ.ಮಹೇಶ್, ಡಾ.ಪ್ರಮೋದ್, ಆಪ್ತ ಸಮಾಲೋಚಕರಾದ ಧರಣೇಶ್, ಹಾಲೇಶ್, ರೇಣುಕಾ ಪ್ರಸಾದ್ ಇತರರಿದ್ದರು.