ಜಿಲ್ಲೆ

ನಾಯಕನಹಟ್ಟಿ ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶರ ದಿಢೀರ್ ಭೇಟಿ

ನಾಯಕನಹಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಗುರುವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಸೌಲಭ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು.

ಪ್ರತಿ ಯೂನಿಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದ ಅವರು, ಎಲ್ಲೆಂದರಲ್ಲಿ ಕಸದ ರಾಶಿ ಹಾಕಿರುವುದನ್ನು ಗಮನಿಸಿ, ಪಪಂ ಮುಖ್ಯಾಧಿಕಾರಿ ಈ ಕೂಡಲೇ ಸ್ಥಳಕ್ಕೆ ಬರುವಂತೆ ಸೂಚಿಸಿ, ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.

ರೋಗಿಗಳಿಗೆ ಪ್ರಶಾಂತ ಮತ್ತು ಸ್ವಚ್ಛ ಪರಿಸರ ಬೇಕು. ಈಗಲೇ ಇಲ್ಲಿನ ಎಲ್ಲ ಕಸದ ಸಮಸ್ಯೆಗೆ ಮುಕ್ತಿ ನೀಡಿ ಎಂದು ಹೇಳಿದರು.

ಸಾರ್ವಜನಿಕರು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯ, ಮಕ್ಕಳ ವೈದ್ಯರ ಕೊರತೆಯಿದೆ. ಪ್ರತಿದಿನ ಕಾರ್ಯನಿರ್ವಹಿಸುವ ವೈದ್ಯರಿಲ್ಲ. ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿಗಳು ಇಲ್ಲ. ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಬುಲೆನ್ಸ್ ಕೆಟ್ಟು ತಿಂಗಳಾದರೂ ರಿಪೇರಿ ಭಾಗ್ಯ ಕಂಡಿಲ್ಲ. ತುರ್ತು ಸಂದರ್ಭಗಳಲ್ಲಿ ಆಸ್ಪ್ರತೆಯ ಆಂಬುಲೆನ್ಸ್ ಇಲ್ಲವಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಗುತ್ತಿಗೆ ಪಡೆದ ಕಂಪನಿ ಕಳೆದ ಎಂಟು ತಿಂಗಳಿಂದ ಅಂಬುಲೆನ್ಸ್ ಚಾಲಕನಿಗೆ ವೇತನ ನೀಡಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಜಿಪಂ ಈ ಬಗ್ಗೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಹೇಳಿದರು. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡುವುದಾಗಿ ನ್ಯಾಯಾಧೀಶರು ಭರವಸೆ ನೀಡಿದರು.

ದೂರುಗಳನ್ನು ಆಲಿಸಿದ ನ್ಯಾಯಾಧೀಶರು, ತಾಲೂಕು ವೈದ್ಯಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಶೀಘ್ರ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.

ಮುಂದಿನ ದಿನಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಭರವಸೆ ನೀಡಿದರು.

ಡಾ.ಓಬಣ್ಣ, ಡಾ.ವಿಕಾಸ್, ಡಾ.ಮಂಜುನಾಥ್, ಡಾ.ಅಶೋಕ್, ಫಾರ್ಮಸಿಸ್ಟ್ ಅಫ್ರೋಜ್ ಇತರರಿದ್ದರು.