ಜಿಲ್ಲೆ

ಆರೋಗ್ಯ ಮತ್ತು ಕ್ಷೇಮಕೇಂದ್ರ ಹೆಚ್ಚಳಕ್ಕೆ ಸಿದ್ದತೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮೀಣ ಪ್ರದೇಶಗಳ ಜನರು ದೂರದ ನಗರ ಪ್ರದೇಶಗಳಿಗೆ ಸಂಚರಿಸಿ ಆರೋಗ್ಯ ಸೇವೆ ಪಡೆಯುವ ಹೊರೆ ತಪ್ಪಿಸಿ, ಸುಲಭವಾಗಿ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರಕಿಸಿಕೊಡಬೇಕೆನ್ನುವ ಆಶಯದೊಂದಿಗೆ ಸ್ಥಾಪನೆಯಾಗಿರುವ ಆರೋಗ್ಯ ಮತ್ತು ಕ್ಷೇಮಕೇಂದ್ರಗಳ ಹೆಚ್ಚಳಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಪ್ರಸ್ತುತ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ 127 ಆರೋಗ್ಯ ಮತ್ತು ಕ್ಷೇಮಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮತ್ತಷ್ಟು ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಲು ನಿವೇಶನಗಳ ತಲಾಶ್ ನಡೆಸಲಾಗುತ್ತಿದೆ. ಪ್ರಸ್ತುತ 26 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಕೇಂದ್ರಗಳು ಬಾಡಿಕೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಕೇಂದ್ರ ಆರೋಗ್ಯ ಇಲಾಖೆ ಸೂಚನೆಯಾಗಿರುವುದರಿಂದ ಆದಷ್ಟು ಸ್ವಂತ ಕಟ್ಟಡಗಳಲ್ಲಿ ಕೇಂದ್ರ ನಡೆಸಬೇಕು ಎಂಬ ಗುರಿಯೊಂದಿಗೆ ಜಿಲ್ಲಾಡಳಿತ ನಿವೇಶನಗಳ ಹುಡುಕಾಟ ಚುರುಕುಗೊಳಿಸಿದೆ.

ಸರ್ಕಾರಿ ಕಟ್ಟಡಗಳೇ ಆಸರೆ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಸರ್ಕಾರಿ ಶಾಲೆ, ಅಂಗನವಾಡಿ, ಹಾಲಿನ ಡೇರಿ ಮತ್ತಿತರ ಸರ್ಕಾರಿ ಕಟ್ಟಡಗಳ ಆಸರೆಯಲ್ಲಿವೆ. ಕೇಂದ್ರದ ಮಾರ್ಗಸೂಚಿಯಂತೆ ಸ್ವಂತ ಕಟ್ಟಡಗಳಿಗೆ ಇವುಗಳನ್ನು ಸ್ಥಳಾಂತರಿಸುವ ಜತೆಗೆ ಮತ್ತಷ್ಟು ಕೇಂದ್ರಗಳನ್ನು ಆರಂಭಿಸುವುದು ಜಿಲ್ಲಾ ಆರೋಗ್ಯ ಕೇಂದ್ರದ ಗುರಿಯಾಗಿದೆ.

ಸ್ವಂತ ನಿವೇಶನ ದುಬಾರಿ: ರಾಜ್ಯ ರಾಜಧಾನಿ ಬೆಂಗಳೂರಿನ ಗಡಿಹಂಚಿಕೊಂಡಿರುವ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನಿವೇಶನ ದಕ್ಕಿಸಿಕೊಳ್ಳುವುದು ಜಿಲ್ಲಾಡಳಿತಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಒಂದು ಕಡೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿ ಭೂಸ್ವಾಧೀನವಾಗುತ್ತಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಖಾಲಿ ನಿವೇಶನಗಳು ಸಿಗುವುದೇ ಕಷ್ಟ ಎಂಬಂತ ಪರಿಸ್ಥಿತಿ ಇದೆ. ನಿವೇಶನ ಸಿಕ್ಕರೂ ದುಬಾರಿ ಬೆಲೆಯಿಂದಾಗಿ ಸ್ವಂತ ಕಟ್ಟಡ ನಿರ್ಮಾಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಪಿಎಚ್‌ಸಿ ಅಡಿ ಎಚ್‌ಡ್ಲಐಸಿ: ಜಿಲ್ಲೆಯಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಡಿಯಲ್ಲಿ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ವಿವಿಧ ಸೇವೆ ಲಭ್ಯವಿದೆ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಸೇವೆಗಳು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ಯೋಗ ಮತ್ತು ಕ್ಷೇಮ ಚಟುವಟಿಕೆಗಳು, ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಪ್ರಮುಖವಾಗಿವೆ. ಸಮುದಾಯದ ಆರೋಗ್ಯವನ್ನು ಸುಧಾರಿಸುವುದು ಮತ್ತು ರೋಗಗಳನ್ನು ತಡೆಗಟ್ಟುವುದು ಈ ಕೇಂದ್ರದ ಪ್ರಮುಖ ಆಶಯವಾಗಿದೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಮತ್ತು ರೋಗಗಳನ್ನು ತಡೆಯಲು ಜನರಿಗೆ ಸಹಾಯ ಮಾಡುತ್ತವೆ. ಪ್ರಾಥಮಿಕ ಹಂತದಲ್ಲಿರುವ ಸಣ್ಣಪುಟ್ಟ ಕಾಯಿಲೆಗಳನ್ನು ಪತ್ತೆ ಹೆಚ್ಚಲು ಹಾಗೂ ಮಕ್ಕಳಿಗೆ ಚುಚ್ಚು ಮದ್ದು ಗರ್ಭಿಣಿಯರ ತಪಾಸಣೆ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಹೊತ್ತು ಜನರು ಸಕಾಲಕ್ಕೆ ದೂರದ ಪ್ರಾಥಮಿಕ ಕೇಂದ್ರಗಳನ್ನು ತಲುಪಲು ಸಾಧ್ಯವಾಗದೆ ಮತ್ತಷ್ಟು ಸಮಸ್ಯೆಗೆ ಸಿಲುಕಬಾರದು ಎಂಬ ದೃಷ್ಟಿಯಿಂದ ಜನಸಂಖ್ಯೆಗೆ ಅನುಗುಣವಾಗಿವಾಗಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಜನರು ಈ ಕೇಂದ್ರಗಳಲ್ಲಿ ಜ್ವರ, ತಲೆ ನೋವು, ಮಧುಮೇಹ, ರಕ್ತದೊತ್ತಡ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಔಷಧ ಸೇರಿ ಸೂಕ್ತ ಮಾರ್ಗದರ್ಶನ ಒದಗಿಸಲಾಗುತ್ತಿದೆ.

30*40 ನಿವೇಶನ ಹುಡುಕಾಟ: ಜಿಲ್ಲೆಯಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳಿಗೆ 30ಗಿ40 ಪಿಸ್ತೀರ್ಣದ ನಿವೇಶನ ಗುರುತಿಸಿ ಕಾಯ್ದಿರಿಸಿ ಆರೋಗ್ಯ ಇಲಾಖೆಗೆ ಹಸ್ತಾರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ನಿವೇಶನಗಳನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆ ಉಪ ನಿರ್ದೇಶಕರು ಕೋರಿಕೆ ಸಲ್ಲಿಸಿದ್ದಾರೆ.ಹೊಸಕೋಟೆ 34, ದೊಡ್ಡಬಳ್ಳಾಪುರ33, ನೆಲಮಂಗಲ28, ದೇವನಹಳ್ಳಿ 32 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

------

ಕೋಟ್()

ಗ್ರಾಮೀಣ ಪ್ರದೇಶಗಳ ಜನರು ದೂರದ ನಗರ ಪ್ರದೇಶಗಳಿಗೆ ಹೋಗಿ ಆರೋಗ್ಯ ಸೇವೆ ಪಡೆಯುವ ಹೊರೆತಪ್ಪಿಸಿ, ಸುಲಭವಾಗಿ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರಕಿಸಿಕೊಡಬೇಕೆನ್ನುವ ಉದ್ದೇಶದಿಂದ ಆರೋಗ್ಯ ಮತ್ತು ಕ್ಷೇಮಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 127 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಸಿದ್ದತೆ ನಡೆದಿದೆ. ಪ್ರಮುಖವಾಗಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇರಬೇಕು ಎಂಬ ಮಾರ್ಗಸೂಚನೆ ಹಿನ್ನೆಲೆಯಲ್ಲಿ ನಿವೇಶನಗಳ ತಲಾಶ್ ನಡೆಯುತ್ತಿದೆ.

ಕೃಷ್ಣರೆಡ್ಡಿ, ಉಪನಿರ್ದೇಶಕ ಜಿಲ್ಲಾ ಆರೋಗ್ಯ ಇಲಾಖೆ ಬೆಂ.ಗ್ರಾಮಾಂತರ