ಬೆಂಗಳೂರು: ಜನಸಾಮಾನ್ಯರಿಗೆ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ರಾಜ್ಯದ 9 ಸಾವಿರ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕಾಸ್ ಶೀಲ್ ಹೇಳಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2018ರಲ್ಲಿ ದೇಶಾದ್ಯಂತ 5 ಸಾವಿರ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿನ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ಈಗಾಗಲೇ 40 ಸಾವಿರ ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2022ರ ವೇಳೆಗೆ ಇವುಗಳ ಸಂಖ್ಯೆಯನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು. ಈಗಾಗಲೇ ಕರ್ನಾಟಕದಲ್ಲಿ 1,930 ಆರೋಗ್ಯ ಕ್ಷೇಮ ಕೇಂದ್ರಗಳು ಕಾರ್ಯರಂಭಗೊಂಡಿವೆ. ಇನ್ನೂ 9 ಸಾವಿರ ಆರೋಗ್ಯ ಕೇಂದ್ರಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನ ಅಂತ್ಯಕ್ಕೆ 3,339 ಕೇಂದ್ರಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ಕ್ಷಯ ಮುಕ್ತ ಸಂಕಲ್ಪ: ರಾಜ್ಯದಲ್ಲಿ 2017ರಿಂದ 2025ರವರೆಗೆ 1.30 ಲಕ್ಷ ಕ್ಷಯ ರೋಗಿಗಳ ಪತ್ತೆ ಗುರಿ ನೀಡಲಾಗಿತ್ತು. ಅದರಂತೆ 2019ರಲ್ಲಿ 91,318 ಕ್ಷಯ ರೋಗಿಗಳನ್ನು ಗುರುತಿಸಲಾಗಿದೆ. ಆ ಮೂಲಕ ಸರ್ಕಾರಿ ವಲಯದಲ್ಲಿ ಶೇ.70 ಹಾಗೂ ಖಾಸಗಿ ವಲಯದಲ್ಲಿ ಶೇ.30 ಸಾಧನೆ ಮಾಡಲಾಗಿದೆ. ದೇಶದಲ್ಲಿ 24.02 ಲಕ್ಷ ಕ್ಷಯ ರೋಗಿಗಳನ್ನು ಗುರುತಿಸಲಾಗಿದೆ. 2025ರ ವೇಳೆಗೆ ಕ್ಷಯ ರೋಗ ಪ್ರಕರಣ ವರದಿಯಾಗದಂತೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ರೋಗಿಗಳ ಪತ್ತೆ ಮತ್ತು ಚಿಕಿತ್ಸೆ ನೀಡುವ ಕಾರ್ಯವನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಆದಾಗಿಯೂ ಔಷಧದ ಅಡ್ಡಪರಿಣಾಮದಿಂದ ಬಹುತೇಕರು ಅರ್ಧದಲ್ಲೇ ಚಿಕಿತ್ಸೆ ನಿಲ್ಲಿಸುತ್ತಿದ್ದಾರೆ. ಇದರಿಂದ ರೋಗ ಹರಡುವುದು ಹೆಚ್ಚುತ್ತಿದೆ. ಆದರೆ ನಿಯಮಿತ ಔಷಧ ಸೇವನೆ ಹಾಗೂ ಚಿಕಿತ್ಸೆಯಿಂದ ಕ್ಷಯರೋಗ ಸಂಪೂರ್ಣ ಗುಣವಾಗುತ್ತದೆ ಎಂಬ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್, ಜಂಟಿ ನಿರ್ದೇಶಕ (ಕ್ಷಯರೋಗ) ಎಸ್. ಅನೀಲ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ವೃದ್ಧರ ಚಿಕಿತ್ಸಾ ಕೇಂದ್ರ
ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಈಗಾಗಲೇ 7 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇವೆ. ಅವನ್ನು 12ಕ್ಕೆ ಹೆಚ್ಚಿಸಿ, ಕ್ಷಯ, ಕುಷ್ಟರೋಗಗಳ ತಪಾಸಣೆ, ಆಹಾರ ಪರಿಶೀಲನೆ, ರೋಗ ಉಪಶಮನ ಹಾಗೂ ವೃದ್ಧರ ಚಿಕಿತ್ಸಾ ಕೇಂದ್ರ ಆರಂಭಿಸಲಾಗುವುದು ಎಂದು ವಿಕಾಸ್ ಶೀಲ್ ಹೇಳಿದರು. ಜನರು ಸುರಕ್ಷಿತ ಆಹಾರ ಸೇವನೆಗೆ ಅನುವಾಗುವಂತೆ ಪ್ರತಿ ಕೇಂದ್ರಗಳಿಗೆ ಆಹಾರ ಪರಿಶೀಲನಾ ಕಿಟ್ ನೀಡಲಾಗುವುದು. ಇದರ ಮೂಲಕ ಜನರು ತಮ್ಮ ಆಹಾರದ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳಬಹುದು ಎಂದರು.
ಇತ್ತೀಚಿನ ವರ್ಷಗಳಲ್ಲಿ ಕೆಲ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬರುತ್ತಿವೆ. ಆದರೆ ಬದಲಾದ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ನೆರವಾಗಲಿವೆ. | ಡಾ. ಓಂಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು