ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅಂಚೆ ವಿಮೆ ನೋಂದಣಿ, ಆರೋಗ್ಯ ಕಾರ್ಡ್ ವಿತರಣೆ ಹಾಗೂ ಮಾಹಿತಿ ಕಾರ್ಯಾಗಾರ ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.
ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಳ್ಯ ತಾಲೂಕಿನ ಅತೀ ಕುಗ್ರಾಮ ಮಡಪ್ಪಾಡಿ ಮತ್ತು ಕೊಲ್ಲಮೊಗ್ರ ಗ್ರಾಮಗಳಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪತ್ರಕರ್ತರು ತಮ್ಮ ಆರೋಗ್ಯದ ಕಡೆಯೂ ಕಾಳಜಿ ವಹಿಸಿಕೊಳ್ಳುವುದು ಅಗತ್ಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಪಾಲಕರಾದ ಮೋಹನ ಎಂ.ಕೆ.ಅಂಚೆ ಇಲಾಖೆಯ ವಿಮೆ ಬಗ್ಗೆ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಆರೋಗ್ಯ ಕಾರ್ಡ್ ವಿತರಣೆ ನೆರವೇರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಸಂಘದ ಉಪಾಧ್ಯಕ್ಷ ಬಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಪತ್ರಕರ್ತ ಗಂಗಾಧರ ಕಲ್ಲಪ್ಪಳ್ಳಿ ಸ್ವಾಗತಿಸಿ, ಗಿರೀಶ್ ಅಡ್ಪಂಗಾಯ ವಂದಿಸಿದರು.