ದೇವನಹಳ್ಳಿ: ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿಯೇ ಇದು ಪ್ರಥಮವಾಗಿದೆ. ಉಳಿದ ಮೂರು ತಾಲೂಕುಗಳಲ್ಲೂ ಈ ವಾರವೇ ಆಯೋಜಿಸಲಾಗುವುದು ಎಂದು ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೂ ನಿರ್ಲಕ್ಷಿಸದೆ ಆರಂಭದಲ್ಲಿಯೇ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗಮುಕ್ತ ಸಮಾಜ ನಿರ್ಮಿಸಬಹುದು. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ಇಲ್ಲದವರಿಗೆ ಮೇಳದಲ್ಲಿ ಕಾರ್ಡ್ ಮಾಡಿಕೊಡಲಾಗುತ್ತದೆ. ಈ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಸೂಚಿಸಿದ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ ಒಂದು ಕುಟುಂಬಕ್ಕೆ 5 ಲಕ್ಷದವರೆಗೂ ಉಚಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದರು.
ಆರೋಗ್ಯ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಬಂದು ತಪಾಸಣೆ ಮಾಡಿಸಿಕೊಡಿದ್ದಾರೆ. ಈ ಶಿಬಿರ 22ರವರೆಗೆ ನಡೆಯಲಿದ್ದು, ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಹೆಚ್ಚಿನ ಜನರಿಗೆ ಆರೋಗ್ಯ ಅರಿವು ಮೂಡಿಸಿ ಕರೆತರುವಲ್ಲಿ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಶಿಬಿರಗಳನ್ನು ಹೋಬಳಿ ಕೇಂದ್ರಗಳಲ್ಲಿ ಆಯೋಜಿಸಿದರೆ ಗ್ರಾಮೀಣ ಭಾಗದವರಿಗೆ ಅನುಕೂಲವಾಗುತ್ತದೆ ಎಂದ ಅವರು, ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾಗ ಪ್ರಾಥಮಿಕ ಚಿಕಿತ್ಸೆ ಅಥವಾ ಮನೆಮದ್ದು ಮಾಹಿತಿ ಇರುವ ಪುಸ್ತಕಗಳನ್ನು ಮುದ್ರಿಸಿ ಹಂಚುವ ಕೆಲಸ ಆರೋಗ್ಯ ಇಲಾಖೆ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಪಂ ಸಿಇಒ ಕೆ.ರೇವಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ.ತಿಪ್ಪೆಸ್ವಾಮಿ, ತಹಸೀಲ್ದಾರ್ ಶಿವರಾಜ್, ಇಒ ವಸಂತಕುಮಾರ್, ಮುಖ್ಯಾಧಿಕಾರಿ ಎಎಚ್.ನಾಗರಾಜ್, ಟಿಎಚ್‌ಒ ಡಾ.ಪಿಕೆ ಸಂಜಯ್, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ ಶ್ರೀಧರಮೂರ್ತಿ, ನಾಮಿನಿ ಸದಸ್ಯರಾದ ಆರ್.ಪುನೀತ, ಮಂಜುಳ, ಮಧುಸೂಧನ್, ಡಾ. ಧರ್ಮೆಂದ್ರ ಮುಂತಾದವರಿದ್ದರು.
ಸಮಸ್ಯೆ ಆಲಿಸಿದ ಡಿಸಿ, ಶಾಸಕ: ಮೇಳದಲ್ಲಿ ಎಲ್ಲ ರೀತಿಯ ರೋಗಗಳ ತಪಾಸಣೆ ಮಾಡಿ, ಔಷಧ ವಿತರಿಸಲಾಯಿತು. ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಆಶಾಕಾರ್ಯಕರ್ತೆಯರು ಮತ್ತು ಆಯುಷ್ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಮಾರಾಟ ಮೇಳ, ಆರೋಗ್ಯ ಅರಿವು, ಯೋಗಾಸನ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ತಪಾಸಣೆಗೆ ಬಂದಿದ್ದವರನ್ನು ಡಿಸಿ ಮತ್ತು ಶಾಸಕರು ಭೇಟಿ ಮಾಡಿ ಸಮಸ್ಯೆ ಆಲಿಸಿದರು.