oppo_2 
ಜಿಲ್ಲೆ

ಜೀವನ ಶೈಲಿ ನಿಸರ್ಗಕ್ಕೆ ಪೂರಕವಾಗಿರಲಿ

ಎ. ಆರ್. ರಘುರಾಮ

 ಮದ್ದೂರು : ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳು ನಿಸರ್ಗಕ್ಕೆ ಪೂರಕವಾಗಿದ್ದರೆ ಮಾತ್ರ ನಾವೆಲ್ಲರೂ ರೋಗ್ಯವಂತರಾಗಿಬಾಳಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ ಕಲ್ಯಾಣ ಮಂದಿರ ಸೇವಾ ಟ್ರಸ್ಟ್, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್, ಅಲಯನ್ಸ್ ಸಂಸ್ಥೆ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮಿಮ್ಸ್ ರಕ್ತ ನಿಧಿ, ವರ್ಧಮಾನ ಕಣ್ಣಿನ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಹೆಚ್ಚಾಗುತ್ತಿರುವ ದುರಾಸೆ, ಹಣ ಮಾಡಬೇಕೆಂಬ ಅತಿಯಾಸೆ, ಬದುಕಿನ ಜಂಜಾಟ, ಒತ್ತಡ, ದೈಹಿಕ ಚಟುವಟಿಕೆ ರಹಿತ ಜೀವನದಿಂದ ಇತ್ತೀಚಿನ ದಿನಗಳಲ್ಲಿ ಮಾನವನ ದೇಹ ರೋಗದ ಗೂಡಾಗಿದೆ. ಬೇಕರಿ ಮತ್ತು ಜಂಕ್‌ಪುಡ್‌ಗಳ ಸೇವೆನೆ ಮಿತಿ ಮೀರಿದ ಕಾರಣ ಚಿಕ್ಕ ವಯಸ್ಸಿನಲ್ಲೇ ಹಲವು ರೋಗಗಳು ಬರುತ್ತಿವೆ. ನಾಲಿಗೆ ರುಚಿಗೆ ಮರುಳಾಗಿ ಯುವಜನರು ಬಲಹೀನರಾಗುತ್ತಿದ್ದಾರೆ. ಇದು ಆತಂಕವಾರಿ ಬೆಳವಣಿಗೆ ಎಂದರು.ನಿಯಮಿತ ಆಹಾರ ಸೇವೆನೆ, ವ್ಯಾಯಾಮ, ಯೋಗ, ಧ್ಯಾನ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ನಮ್ಮದನ್ನಾಗಿಸಿಕೊಳ್ಳಬೇಕು. ನೆಮ್ಮದಿ ಜೀವನ ನಡೆಸಬೇಕು. ಹಣವೇ ಸರ್ವಸ್ವ ಎಂಬುದನ್ನು ಬಿಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಸುರೇಶ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿವಿಧ ಸಂಘ, ಸಂಸ್ಥೆಗಳ ನೆರವು ಪಡೆದು ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದು ರೋಗಮುಕ್ತರಾಗಬೇಕು ಎಂದರು.

ಹಳ್ಳಿಗಾಡಿನ ಜನರು ಆರೋಗ್ಯ ಪಾಲನೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅರಿಯಬೇಕು. ಮುಂಬರುವ ದಿನಗಳಲ್ಲಿ ಆಬಲವಾಡಿ ಗ್ರಾಮದಲ್ಲಿ ಕ್ಯಾನ್ಸರ್ ಸೇರಿದಂತೆ ಇನ್ನಿತರ ರೋಗಗಳ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಿಬಿರದಲ್ಲಿ ರಕ್ತದ ಒತ್ತಡ, ಇಸಿಜಿ, ಇಕೋ, ಮೂಳೆ ಪರೀಕ್ಷೆ, ಗರ್ಭಕೋಶದ ಪರೀಕ್ಷೆ, ಕಣ್ಣು ಪೊರೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಮಕ್ಕಳ ತಪಾಸಣೆ ನಡೆಯಿತು. ಆಬಲವಾಡಿ ಸೇರಿದಂತೆ ಸುತ್ತಮುತ್ತ ನೂರಾರು ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಸುರೇಶ, ಕಲ್ಯಾಣ ಮಂದಿರ ಟ್ರಸ್ಟ್ ಅಧ್ಯಕ್ಷ ಟಿ.ಕೃಷ್ಣೇಗೌಡ, ಪಿಎಸಿಎಸ್ ಅಧ್ಯಕ್ಷ ಟಿ.ಪುಟ್ಟಸ್ವಾಮಿ, ಡಾ.ಕೆ.ಯಶ್ವಂತ್, ಡಾ.ಕಾರ್ತಿಕ್, ಡಾ.ಅರುಣ್‌ಕುಮಾರ್, ತಾಪಂ ಮಾಜಿ ಸದಸ್ಯ ಕರಿಗೌಡ, ಯಜಮಾನರಾದ ವೀರಣ್ಣ, ತಿಮ್ಮೇಶ್, ಗೋವಿಂದಣ್ಣ, ಚಿಕ್ಕೋನು, ಮುಖಂಡರಾದ ಪ್ರದೀಪ್, ಸುಶೀಲ್, ಬಲರಾಮ್, ಶಿವಮಾದು, ಅನಿಲ್ ಇದ್ದರು.