ಚಿಕ್ಕಬಳ್ಳಾಪುರ: ನಿರಂತರ ಪೌಷ್ಟಿಕ ಆಹಾರ ಮತ್ತು ಶುದ್ಧ ನೀರು ಸೇವನೆಯು ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಆರೋಗ್ಯವೇ ದೊಡ್ಡ ಸಂಪತ್ತು. ಇದನ್ನು ಒಳ್ಳೆಯ ಹವ್ಯಾಸಗಳಿಂದ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದರು.
ಕಲುಷಿತ ನೀರಿನ ಸೇವನೆಯಿಂದ ಹಲವು ರೋಗಗಳು ಬಾಧಿಸುತ್ತವೆ. ಆದರೂ ಹಲವೆಡೆ ನೀರು ಶುದ್ಧೀಕರಣದ ಬಗ್ಗೆ ತಿಳಿದುಕೊಳ್ಳದೆ ಆರೋಗ್ಯ ಕೆಡಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ ಎಂದರು. ಜಿಲ್ಲೆಯು ಮಳೆಯ ಅಭಾವ, ಅಂತರ್ಜಲಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಜಿಲ್ಲೆಯ ಬಹುತೇಕ ಭಾಗಗಳಲ್ಲಿನ ನೀರಿನಲ್ಲಿ ನೈಟ್ರೇಟ್, ಫ್ಲೋರೈಡ್ ಸೇರಿ ಮಾರಕ ಲವಣಾಂಶ ಅಧಿಕವಾಗಿದೆ. ಇದರಿಂದ ಗಂಭೀರ ಸಮಸ್ಯೆಗಳು ಉಂಟಾಗದಿರಲು ನಿಗದಿತ ಸ್ಥಳಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.
ಆಯಾ ಭಾಗದ ವ್ಯಾಪ್ತಿಯಲ್ಲಿನ ಜನರ ಆರೋಗ್ಯದ ಬಗ್ಗೆ ವೈದ್ಯರು ಗಮನಹರಿಸಬೇಕು. ಅಲ್ಲಿನ ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜತೆಗೆ ಸಂಬಂಧಪಟ್ಟ ಇಲಾಖೆಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಇದರಿಂದ ಪ್ರಾಥಮಿಕ ಹಂತದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಸರ್ಜನ್ ಡಾ.ರುದ್ರಮೂರ್ತಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ಜಿಲ್ಲಾ ಫ್ಲೋರೋಸಿಸ್ ಸಮಾಲೋಚಕ ವಿ.ಆರ್.ವಿನೋದ್ಕುಮಾರ್ ಮತ್ತಿತರರು ಇದ್ದರು.
ವೈದ್ಯಾಧಿಕಾರಿಗಳ ಚರ್ಚೆ: ಜಿಲ್ಲಾ ಆಸ್ಪತ್ರೆಯ ಮೂಳೆ ತಜ್ಞರು, ದಂತ, ಜನರಲ್ ಮೆಡಿಸನ್, ಪ್ರಸೂತಿ ತಜ್ಞರು ಸೇರಿ ವೈದ್ಯಾಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಮುಂಚಿತವಾಗಿ ಫ್ಲೋರೋಸಿಸ್ ಪ್ರಕರಣಗಳನ್ನು ಕಂಡುಹಿಡಿಯುವಿಕೆ, ಧೃಢಪಟ್ಟ ಪ್ರಕರಣಗಳಿಗೆ ಚಿಕಿತ್ಸೆ ನೀಡುವಿಕೆ, ನಿರಂತರ ನಿಗಾ, ಸಬ್ ಕ್ಲಿನಿಕಲ್ ಫ್ಲೋರೋಸಿಸ್ ಪ್ರಕರಣಗಳ ಗಂಭೀರತೆ ಅರಿಯುವಿಕೆ ಸೇರಿ ತೀವ್ರ ಮಟ್ಟದ ಫ್ಲೋರೋಸಿಸ್ ರೋಗ ಬಾರದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಲಾಯಿತು.
ಮಾದರಿ ಸಂಗ್ರಹ: ಫ್ಲೋರೋಸಿಸ್ ಕಾಯಿಲೆ ಪ್ರಕರಣಗಳ ಪತ್ತೆಗಾಗಿ ಶಿಡ್ಲಘಟ್ಟ, ಗುಡಿಬಂಡೆ, ಬಾಗೇಪಲ್ಲಿ ಸೇರಿ ವಿವಿಧೆಡೆ ಇರುವ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಮೂತ್ರದ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸುತ್ತಿದ್ದು, ಇದರಲ್ಲಿ ಸಿಗುವ ಸರಾಸರಿ ಫಲಿತಾಂಶ ಆಧರಿಸಿ ಮುಂಜಾಗ್ರತೆ ಕೈಗೊಳ್ಳಲಾಗುವುದು. ಶಾಲೆಗಳಲ್ಲಿ ಶುದ್ಧ ನೀರಿನ ಸೇವನೆಯ ಮಹತ್ವದ ಅರಿವು ಮೂಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.