ಜಿಲ್ಲೆ

ಋತುಚಕ್ರ ಏರುಪೇರಿಗೆ ಜೀವನಶೈಲಿ ಕಾರಣ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬದಲಾದ ಜೀವನ ಶೈಲಿ ಮತ್ತು ಆಹಾರ ಪದಾರ್ಥ, ಫಾಸ್ಟ್ ಮತ್ತು ಜಂಕ್‌ಫುಡ್ ಸೇವನೆಯಿಂದ ಮಹಿಳೆಯರಲ್ಲಿ ಋತುಚಕ್ರ ಏರುಪೇರಾಗುತ್ತಿದೆ. ಮಾತ್ರವಲ್ಲದೆ ಹೆಣ್ಣುಮಕ್ಕಳು ಬಹುಬೇಗನೇ ಋತುಮತಿಯಾಗುತ್ತಿದ್ದಾರೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ಹೇಳಿದರು.

ತಾಲೂಕಿನ ಗೊರವಾಲೆ ಸರ್ಕಾರಿ ಶಾಲೆ ಆವರಣದಲ್ಲಿ ಶಿವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಹಾಗೂ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್ ಬಳಕೆ ಹೆಚ್ಚಾಗಬೇಕಿದೆ. ಮಹಿಳೆಯರಲ್ಲಿ ಮುಟ್ಟು ಅಥವಾ ಋತುಚಕ್ರ ಪ್ರಕೃತಿಯ ಸಹಜ ಕ್ರಿಯೆ. ಹದಿಹರೆಯದ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ತಾಯಿಯ ಪೋಷಣೆಯಲ್ಲಿರುತ್ತಾರೆ. ಸ್ವ ಸ್ವಚ್ಛತೆಯಿಂದ ಆರೋಗ್ಯ ನೋಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಸಬಲೀಕರಣ ಹೆಚ್ಚಾದಂತೆಲ್ಲ ಮಹಿಳೆಯರ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಋತುಚಕ್ರದ ದಿನಗಳಲ್ಲಿ ಬಟ್ಟೆ, ಸ್ಯಾನಿಟರಿ ಪ್ಯಾಡ್ ಬಳಕೆ ಕಡಿಮೆ ಮಾಡಿ. ಮುಟ್ಟಿನ ಕಪ್‌ಗಳನ್ನು ಹೆಚ್ಚು ಬಳಕೆ ಮಾಡುವುದು ಉತ್ತಮ. ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಹೆಚ್ಚಿದ್ದು, ಕ್ಯಾನ್ಸರ್ ಕಾರಕ ಪ್ರಕರಣ ಹೆಚ್ಚಾಗುತ್ತಿವೆ. ಇವುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿ. ಕಡಿಮೆ ದುಡ್ದಿನ ಕಪ್‌ಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ. ಗ್ರಾಮ ಪಂಚಾಯಿತಿಗಳಿಂದ ಉಚಿತವಾಗಿ ವಿತರಣೆಯಾಗುತ್ತಿದೆ ಎಂದು ತಿಳಿಸಿದರು.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಶಿಲ್ಪಶ್ರೀ ಮಾತನಾಡಿ, ಮಹಿಳೆಯರಿಗೆ ಮುಟ್ಟು ಪ್ರಕೃತಿಯ ವರ. ಇದರಿಂದಲೇ ಜನನ, ಇಂತಹ ಭಾಗ್ಯವನ್ನು ಪಡೆದ ಮಹಿಳೆಯರೇ ಧನ್ಯರು. ಸಂತಾನೋತ್ಪತ್ತಿಗೆ ಮೂಲಾಧರ ಮಹಿಳೆಯರಾಗಿದ್ದಾರೆ. ಅವರಿಗೆ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಅಂಶ ಕಾಣಿಸಿಕೊಳ್ಳುತ್ತಿವೆ. ಋತುಚಕ್ರ ದಿನಗಳಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳಿಂದ ಕ್ಯಾನ್ಸರ್ ಬರುತ್ತಿದೆ ಎಂಬ ವರದಿ ಬಂದಿದೆ. ಆದ್ದರಿಂದ ಮುಟ್ಟಿನ ಕಪ್‌ಗಳನ್ನು ಬಳಕೆ ಮಾಡಿ ಎಂದರು.

ಶಿವಳ್ಳಿ ಗ್ರಾ.ಪಂ ಅಧ್ಯಕ್ಷೆ ಎಂ.ಸಿ.ಉಷಾ, ಉಪಾಧ್ಯಕ್ಷೆ ನವ್ಯಶ್ರೀ, ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಪ್ರಕಾಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ.ಶೋಭಾರಾಣಿ, ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಇತರರಿದ್ದರು.

ಇದೇ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ತಡೆ, ಮಾನವ ಕಳ್ಳಸಾಗಾಣಿಕೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ಹೆಣ್ಣು ಭ್ರೂಣ ಹತ್ಯೆ, ಕಾನೂನು ಅರಿವು, ಕೌಟುಂಬಿಕ ದೌರ್ಜನ್ಯ ತಡೆ ಕುರಿತು ಜಾಗೃತಿ ಮೂಡಿಸಲಾಯಿತು.