ಮಾನ್ವಿ: ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನಹರಿಸಬೇಕು. ಉಚಿತ ಶಿಬಿರಗಳ ಪ್ರಯೋಜನ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಲ್ಮಠದ ವಿರೂಪಾಕ್ಷ ಶಿವಾಚಾರ್ಯರು ಹೇಳಿದರು.
ಇದನ್ನೂ ಓದಿ:ಮಧುಮೇಹ ರೋಗ ಉಚಿತ ತಪಾಸಣೆ ಶಿಬಿರ
ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಾಸವಿ ಜಯಂತಿ ಅಂಗವಾಗಿ ನಗರೇಶ್ವರ ಆರ್ಯವೈಶ್ಯ ಸಂಘ ಹಾಗೂ ಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಪ್ರಸ್ತುತ ಒತ್ತಡದ ಬದುಕಿನಲ್ಲಿ ಯಾರೂ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಆರೋಗ್ಯ ಕೈಕೊಟ್ಟಾಗ ಮಾತ್ರ ಚಿಂತಿಸುತ್ತೇವೆ. ಇಂತಹ ಶಿಬಿರಗಳಲ್ಲಿ ಆರೋಗ್ಯ ಪರೀಕ್ಷಿಸಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಐಎಂಎ ತಾಲೂಕು ಅಧ್ಯಕ್ಷ ಡಾ.ಶರಣಪ್ಪ ಬಲ್ಲಟಗಿ ಮಾತನಾಡಿ, ವೈದ್ಯರು ತುರ್ತು ಪರಿಸ್ಥಿತಿಗಳಲ್ಲಿ ಸಹ ರೋಗಿಯ ಪ್ರಾಣ ಉಳಿಸುವುದಕ್ಕೆ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ರೋಗಿ ಜೀವ ಉಳಿಸುವಲ್ಲಿ ವಿಫಲರಾಗುತ್ತಾರೆ. ಅಗ ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ನಷ್ಟ ಉಂಟು ಮಾಡುವುದು ಸರಿಯಲ್ಲ. ಹೀಗಾಗಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಹೆದರುವಂತಾಗಿದೆ ಎಂದರು. 250ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷಧಗಳನ್ನು ವಿತರಿಸಲಾಯಿತು.
ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿ, ಕಾರ್ಯದರ್ಶಿ ಬಿ.ಈರಣ್ಣ, ಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಧ್ಯಕ್ಷ ರಾಮಾಂಜನೇಯ ಶೆಟ್ಟಿ, ಡಾ.ರಾಘವೇಂದ್ರ, ಡಾ.ಸುಮನ್, ಡಾ.ಕಾವ್ಯಾ, ಡಾ.ಕೋಟಿರೆಡ್ಡಿ, ಸೈಯ್ಯದ್ ಖಾಲಿದ್ ಗುರು ಇತರರಿದ್ದರು.