ಜಿಲ್ಲೆ

ಆರೋಗ್ಯ, ಸೌಂದರ್ಯ ಒಂದೇ ನಾಣ್ಯದ ಎರಡು ಮುಖ

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಧಾರವಾಡ ಮಹಿಳಾ ಘಟಕವು ಧಾರವಾಡದ ವಿಠ್ಠಲ ನರ್ಸಿಂಗ್ ಹೋಂನಲ್ಲಿ ಇತ್ತೀಚೆಗೆ ಮಹಿಳಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮವು ವಿಶಿಷ್ಟತೆಯಿಂದ ಕೂಡಿತ್ತು.
ಅಬಲೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಆರ್ಥಿಕ ನೆರವು, 30 ವೈದ್ಯೆಯರಿಗೆ ಗರ್ಭಾಶಯ ಕ್ಯಾನ್ಸರ್ ತಪಾಸಣೆ, ಮೆಡಿಕ್ವೀನ್ ಭಾರತ್ ಅಂತಾರಾಷ್ಟ್ರೀಯ ಪೇಜೆಂಟ್‌ನ ರನ್ನರ್ ಆಪ್ ಡಾ. ಭಾವನಾ ನಾರಂಗ ಮಲ್ಹೋತ್ರಾ ಅವರನ್ನು ಸನ್ಮಾನಿಸಲಾಯಿತು.
ರೆಡಾನ್ ಕ್ಯಾನ್ಸರ್ ಆಸ್ಪತ್ರೆಯ ಡಾ. ಶೀತಲ್ ಕುಲಗೋಡ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಹಗಲಿರುಳು ದುಡಿಯುವ ವೈದ್ಯರೂ ಆರೋಗ್ಯದಿಂದ ಇರಬೇಕು. ಅದರಲ್ಲೂ ಕ್ಯಾನ್ಸರ್ ಬಗ್ಗೆ ಎಚ್ಚರಿಕೆ ಅಗತ್ಯ. ಹಾಗಾಗಿ ವೈದ್ಯೆಯರಿಗೆ ಗರ್ಭಾಶಯ ಕ್ಯಾನ್ಸರ್ ತಪಾಸಣೆ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ ವಿತರಿಸುವ ಎಚ್‌ಪಿವಿ ಲಸಿಕೆಯನ್ನು ಪಡೆಯಬೇಕು. ಕ್ಯಾನ್ಸರ್ ಕಾಯಿಲೆ ಬಾರದಂತೆ ಸಂರಕ್ಷಿಸಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.
ಐಎಂಎ ಧಾರವಾಡ ಮಹಿಳಾ ಘಟಕದ ಚೇರ್ಪರ್ಸನ್ ಡಾ. ಕವಿತಾ ಮಂಕಣಿ ಮಾತನಾಡಿ, ನಮ್ಮ ಘಟಕದಿಂದ ವಿಶಿಷ್ಟವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಇದಕ್ಕೆಲ್ಲ ತಮ್ಮ ತಂಡದ ಪ್ರೇರಣೆ ಕಾರಣ. ಮಹಿಳೆಯರ ಬಗೆಗೆ ಕಾಳಜಿ ವಹಿಸಿ ಇನ್ನಷ್ಟು ಹೊಸ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಭಾವನಾ ನಾರಂಗ ಮಲ್ಹೋತ್ರಾ, ಆರೋಗ್ಯ ಮತ್ತು ಸೌಂದರ್ಯ ಒಂದೇ ನಾಣ್ಯದ ಎರಡು ಮುಖಗಳು. ಆರೋಗ್ಯವನ್ನು ಸಂರಕ್ಷಿಸಿಕೊಂಡಷ್ಟು ನಾವು ಸೌಂದರ್ಯವಾಗಿ ಕಾಣಲು ಸಾಧ್ಯ. ಇದರ ಗುಟ್ಟು ಅರಿತರೆ ಸಾಕು ಎಂದು ಸಲಹೆ ನೀಡಿದರು.
ರ‌್ಯಾಪಿಡ್ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಲ್ಲಿ ಹೂಡಿಕೆ ಪ್ರಗತಿಯ ವೇಗಕ್ಕಾಗಿ ಅಂಗವಿಕಲೆ ಗಂಗಾ ಕಟ್ಟಿಮನಿ ಹಾಗೂ ರಜನಿ ದೇಶಪಾಂಡೆ ಅವರಿಗೆ ತಲಾ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಯಿತು.
ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ, ಖಜಾಂಚಿ ಡಾ. ಸಿದ್ದಗಂಗಾ, ರ‌್ಯಾಪಿಡ್ ಸಂಸ್ಥೆಯ ಸಿಇಒ ಮಾಳವಿಕಾ, ಡಾ. ರೂಪಾ ಜೋಶಿ, ಡಾ. ವಾಣಿ ಇರಕಲ್, ಡಾ. ಸರ್ವಮಂಗಳಾ, ಡಾ. ಸಂತೋಷಿ, ಡಾ. ಪರಿಣಿತಾ, ಇತರರು ಇದ್ದರು.