ಕುಶಾಲನಗರ:
ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಮತ್ತು ಕ್ಷಯ ರೋಗ ಕಾರ್ಯಕ್ರಮದ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ಮಂಗಳವಾರ ನಡೆಯಿತು. ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಾನಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮಾತನಾಡಿ, ನೇತ್ರದಾನದ ಮಹತ್ವದ ಬಗ್ಗೆ ತಿಳಿಸುತ್ತಾ ಯಾವುದೇ ವಯಸ್ಸು, ಲಿಂಗ, ಧರ್ಮ ಅಥವಾ ರಕ್ತದ ಗುಂಪಿನ ಭೇದವಿಲ್ಲದೆ ಯಾರು ಬೇಕಾದರೂ ಕಣ್ಣುಗಳನ್ನು ದಾನ ಮಾಡಬಹುದು. ಕಣ್ಣುಗಳ ಸಂಗ್ರಹಕ್ಕೆ ಕೇವಲ 20 ನಿಮಿಷಗಳು ಬೇಕಾಗುತ್ತದೆ. ಮತ್ತು ಇದು ಮುಖದ ಚಹರೆಯನ್ನು ಬದಲಿಸುವುದಿಲ್ಲ. ಮರಣದ ಆರು ಗಂಟೆಗಳ ಒಳಗೆ ಕಣ್ಣುಗಳನ್ನು ಸಂಗ್ರಹಿಸಬೇಕು. ಮರಣದ ನಂತರ ಮಾತ್ರ ಕಣ್ಣುಗಳನ್ನು ದಾನ ಮಾಡಲು ಸಾಧ್ಯ. ನಮ್ಮ ಮರಣದ ನಂತರವೂ ನಮ್ಮ ಕಣ್ಣುಗಳು ಇತರರಿಗೆ ನೆರವಾಗಲಿ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಣಾ ಅಧಿಕಾರಿ ಸಂಜಯ್ ಮಾತನಾಡಿ, ಮಲೇರಿಯಾ ಜ್ವರ ಶೀಘ್ರ ವಾಗಿ ಪತ್ತೆ ಹಚ್ಚಿ ಸಂಪೂರ್ಣವಾದ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಬಹುದು. ಡೆಂಘೀ ಜ್ವರ, ಮಲೇರಿಯಾ ಜ್ವರದ ಲಕ್ಷಣಗಳು ಮತ್ತು ಚಿಕಿತ್ಸೆ, ಸೊಳ್ಳೆಗಳ ಜೀವನ ಚಕ್ರ, ಮಲೇರಿಯ ಜ್ವರ, ಚಿಕೂನ್ ಗುನ್ಯಾ ಜ್ವರದ ಬಗ್ಗೆ ತಿಳಿಸಿದರು.
ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಪುಟ್ಟರಾಜು ಮಾತನಾಡಿ, ಕ್ಷಯರೋಗದ ಲಕ್ಷಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. ಕ್ಷಯರೋಗ ರೋಗ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.
ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ನಾಗೇಂದ್ರಾಚಾರ್, ಫಾರ್ಮಸಿಸ್ಟ್ ಚಂದ್ರಶೇಖರ, ಆಶಾ ಕಾರ್ಯಕರ್ತರಾದ ಚಂದ್ರಾವತಿ, ಅಮೃತ ನಂದೀಶ್, ಕವಿತಾ ಇದ್ದರು.