ಮಡಿಕೇರಿ:
ಶಿರಂಗಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ಮಂಗಳವಾರ ನಡೆಸಲಾಯಿತು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾ ವಿಶ್ವಜ್ಞಾ ಈ ವೇಳೆ ಮಾತನಾಡಿ, ಡೆಂಘೀ ಮತ್ತು ಮಲೇರಿಯಾ ಜ್ವರ ಶೀಘ್ರವಾಗಿ ಪತ್ತೆ ಹಚ್ಚಿ ಸಂಪೂರ್ಣವಾದ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಬಹುದು ಎಂದರಲ್ಲದೆ ಡೆಂಘೀ, ಮಲೇರಿಯಾ ಜ್ವರದ ಲಕ್ಷಣಗಳು ಮತ್ತು ಚಿಕಿತ್ಸೆ, ಸೊಳ್ಳೆಗಳ ಜೀವನ ಚಕ್ರ, ಚಿಕೂನ್ ಗುನ್ಯಾ ಜ್ವರ, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮ, ವಿಶ್ವ ಜನಸಂಖ್ಯಾ ದಿನಾಚರಣೆಯ ಮಹತ್ವ, ಪರಿಸರ ಸ್ವಚ್ಛತೆ, ನೀರಿನ ಶುಚಿತ್ವ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಆರೋಗ್ಯ ಶಿಕ್ಷಣ ಕುರಿತು ಮಾಹಿತಿ ನೀಡಿದರು.
ಹಿರಿಯ ಪ್ರಯೋಗಾಲಯ ತಂತ್ರಜ್ಞ ಪುಟ್ಟರಾಜು ಮಾತನಾಡಿ ಕ್ಷಯರೋಗದ ಲಕ್ಷಣಗಳು, ಕ್ಷಯರೋಗದ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ರೋಗ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಕ್ಷಯ ರೋಗ ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಸೌರಭ್, ಪ್ರಯೋಗಶಾಲಾ ತಂತ್ರಜ್ಞರಾದ ಯೋಗಿತಾ, ಗಣಕಯಂತ್ರ ಸಹಾಯಕಿ ಐಶ್ವರ್ಯ, ರಕ್ಷಿತ, ಶಿವಪ್ಪ ಇದ್ದರು.