ಜಗಳೂರು: ತಾಲೂಕಿನ ಉರುಲಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಸರಿಯಾಗಿ ಶಾಲೆಗೆ ಬಾರದೆ, ಸಹ ಶಿಕ್ಷಕಿಯೊಂದಿಗೆ ಗಲಾಟೆ ಮಾಡಿಕೊಂಡು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದ್ದಾರೆ ಎಂದು ಆಪಾದಿಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 10 ಗಂಟೆಗೆ ಶಾಲೆಗೆ ಆಗಮಿಸಿದ ಪಾಲಕರು ಶಾಲೆಯ ಗೇಟ್‌ಗೆ ಬೀಗ ಹಾಕಿ ವಿದ್ಯಾರ್ಥಿಗಳನ್ನು ಕೂರಿಸಿ ಘೋಷಣೆ ಕೂಗಿದರು.
ಮುಖ್ಯಶಿಕ್ಷಕಿ ಜಯಮ್ಮ ಶಾಲೆಗೆ ಸರಿಯಾಗಿ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿಲ್ಲ. ಸಹ ಶಿಕ್ಷಕಿ ಮಧ್ಯೆ ನಿತ್ಯ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇವರ ಜಗಳದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇಂತಹ ಶಿಕ್ಷಕರು ಒಟ್ಟಿಗೆ ಇದ್ದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ಮಕ್ಕಳಿಗೆ ಪಾಠ ಬೋಧಿಸುವ ಶಿಕ್ಷಕರೇ ಮಕ್ಕಳ ಮುಂದೆ ಸಣ್ಣತನ ತೋರುತ್ತಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಇಬ್ಬರನ್ನೂ ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ನೇಮಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಬಿಇಒ ಈ.ಹಾಲಮೂರ್ತಿ ಗ್ರಾಮಕ್ಕೆ ಭೇಟಿ ನೀಡಿ, ಮುಖ್ಯ ಶಿಕ್ಷಕಿ, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಜತೆ ಸಭೆ ನಡೆಸಿದರು. ಶಿಕ್ಷಕರು ಮಕ್ಕಳ ಮುಂದೆ ಹೀಗೆ ಜಗಳವಾಡಿದರೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ತಾಳ್ಮೆಯಿಂದ ವರ್ತಿಸಬೇಕು. ಸಮಯಕ್ಕೆ ಸರಿಯಾಗಿ ಶಾಲೆಗೆ ಬನ್ನಿ. ಮಕ್ಕಳಿಗೆ ಪಾಠ ಮಾಡಿ ಎಂದು ಬುದ್ಧಿ ಹೇಳಿ ಸಮಸ್ಯೆ ಬಗೆಹರಿಸಿದರು. ನಂತರ ಗ್ರಾಮಸ್ಥರು, ಮಕ್ಕಳು ಪ್ರತಿಭಟನೆ ವಾಪಾಸ್ ಪಡೆದರು. ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರ್, ಮುಖಂಡರಾದ ಬಸವರಾಜಪ್ಪ, ಎ.ಕೆ. ಮಹಾಂತೇಶ್, ಟೈಲರ್ ಬಸವರಾಜಪ್ಪ, ನಿಂಗನಗೌಡ, ಪಿ. ಬಸವರಾಜಪ್ಪ, ಲಿಂಗರಾಜ್ ಇದ್ದರು.