ಗಂಗಾಧರ್ ಬೈರಾಪಟ್ಟಣ ರಾಮನಗರ
ನಮ್ಮ ಮನೆ ಹತ್ರ ಕಸಕ್ಕೆ ಬೆಂಕಿ ಬಿದ್ದಿದೆ, ಇಲ್ಲಿ ಇರೋ ಸೌಧೆಗೆ ಯಾರೋ ಬೆಂಕಿ ಹಚ್ಚಿ ಹೋಗಿದ್ದಾರೆ ಬೇಗ ಬನ್ನಿ ಸಾರ್... ಎಂದು ನೀವೇನಾದರೂ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದರೆ, ನಿಮ್ಮ ಕರೆಗೆ ಸ್ಪಂದನೆ ಸಿಗುವುದು ಕೊಂಚ ತಡವಾಗಬಹುದು.
ಹೌದು.. ಈ ಬಾರಿಯ ಬೇಸಿಗೆ ಅಗ್ನಿ ಶಾಮಕ ಇಲಾಖೆಗೂ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಂತೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶ, ಅಗ್ನಿ ಶಾಮಕ ಇಲಾಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅಗತ್ಯವಾಹನಗಳು ಇಲ್ಲದೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಪ್ರಶ್ನೆ ಇಲಾಖೆಯನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 5 ತಾಲೂಕುಗಳಿದ್ದು, ಹಾರೋಹಳ್ಳಿ ಹೊರತುಪಡಿಸಿ ಉಳಿದ 4 ತಾಲೂಕುಗಳಲ್ಲಿ ತಲಾ ಒಂದೊಂದು ಅಗ್ನಿಶಾಮಕ ಠಾಣೆಗಳಿವೆ. ಇಲ್ಲಿ ಕೇಂದ್ರ ಸರ್ಕಾರದ ಆದೇಶದವರೆಗೂ ತಲಾ 2 ಅಗ್ನಿ ಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇಲಾಖೆಯಲ್ಲಿರುವ 8 ವಾಹನಗಳಲ್ಲಿ 15 ವರ್ಷ ಮೀರಿದ 4 ವಾಹನಗಳಿದ್ದು ಮಿಕ್ಕುಳಿದ 4 ವಾಹನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.
ಇದು ಕೇವಲ ರಾಮನಗರ ಜಿಲ್ಲೆಗೆ ಸೀಮಿತವಾದ ಸಮಸ್ಯೆಯಲ್ಲ. ರಾಜ್ಯಾದ್ಯಂತ ಇದೇ ಸಮಸ್ಯೆ ಕಾಡುತ್ತಿದೆ. ಅಗ್ನಿ ಶಾಮಕ ಇಲಾಖೆಗೆ ಸೇರಿದ ಒಟ್ಟು 443 ವಾಹನಗಳು 15 ವರ್ಷ ಮತ್ತು ಅದಕ್ಕಿಂತ ಹಿಂದಿನ ವಾಹನಗಳು. ಕೇಂದ್ರ ಸರ್ಕಾರದ ಸೂಚನೆಯಂತೆ ಇವುಗಳ ಬಳಕೆಗೆ ಸಾರಿಗೆ ಇಲಾಖೆ ಕೂಡ ಒಪ್ಪಿಗೆ ಸೂಚಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಕೇಂದ್ರಕ್ಕೆ ಪತ್ರ ಬರೆದು, ವಾಹನಗಳ ಬಳಕೆಗೆ ಅವಕಾಶ ನೀಡುವಂತೆ ಕೋರಿದೆ. ಒಂದು ವೇಳೆ ಇದಕ್ಕೆ ಅನುಮತಿ ಸಿಕ್ಕರೆ ಸಮಸ್ಯೆಗೆ ಪರಿಹಾರ ದೊರೆತಂತೆ ಆಗುತ್ತದೆ. ಒಂದು ವೇಳೆ ರಾಜ್ಯದ ಮನವಿಗೆ ಕೇಂದ್ರ ಒಪ್ಪದಿದ್ದರೆ ಬೇಸಿಗೆ ಸರ್ಕಾರಕ್ಕೂ ದುಬಾರಿ ಆಗಲಿದೆ.
ರಾಮನಗರ ಜಿಲ್ಲೆ ದೇಶದಲ್ಲಿಯೇ ಎರಡು ಪ್ರಮುಖ ಕೈಗಾರಿಕೆ ಕ್ಷೇತ್ರಗಳನ್ನು ಹೊಂದಿದೆ. ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಆಯಾ ಕಂಪನಿಗಳು ತಮ್ಮ ವ್ಯಾಪ್ತಿಗೆ ಅನುಗುಣವಾಗಿ ಅಗ್ನಿ ಶಾಮಕ ಸಾಧನಗಳನ್ನು ಹೊಂದಿರುವುದು ಬಿಟ್ಟರೆ, ಭಾರೀ ಅಗ್ನಿ ಅವಘಡ ಸಂಭವಿಸಿದರೆ, ಬೆಂಗಳೂರು ಸೇರಿ ಜಿಲ್ಲೆಯ ಇತರೆ ಠಾಣೆಗಳಿಂದಲೇ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಬರಬೇಕಾದಂತಹ ಶೋಚನೀಯ ಪರಿಸ್ಥಿತಿ ಇದೆ.
ಮನೆಗಳ ಬಳಿಯೂ ಉಂಟಾಗಬಹುದಾದ ಬೆಂಕಿ ಅವಘಡಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳಬೇಕಿದೆ. ಸಾಧ್ಯವಾದಷ್ಟು ಮನೆಗಳಲ್ಲಿ ಅಡುಗೆ ನಂತರ ಬೆಂಕಿ ನಂದಿಸುವ ಹಾಗೂ ಬೆಂಕಿಗೆ ತಕ್ಷಣವೇ ಹೊತ್ತಿ ಉರಿಯುವ ಇಂಧನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಬೇಕು. ಮನೆ ಪಕ್ಕದಲ್ಲಿಯೇ ಹುಲ್ಲು, ಸೌದೆಗಳ ಬಣವೆಗಳಿದ್ದರೆ ಇದರ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕಿದೆ.
1. ಮನೆ, ಹುಲ್ಲಿನ ಮೆದೆಗೆ, ಮರದ ರಾಶಿಗೆ ಬೆಂಕಿ ತಗುಲಿದಾಗ ಸಾಕಷ್ಟು ಮರಳು ಮತ್ತು ನೀರನ್ನು ಸುರಿಯುವುದು.
2. ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರನ್ನು ಸುರಿಯದೆ, ಬೆಂಕಿ ನಂದಿಸಲು ಹೆಚ್ಚಿನ ಮರಳನ್ನು ಬಳಸುವುದು.
3. ವಿದ್ಯುತ್‌ನಿಂದಾಗಿ ಸಂಭವಿಸುವ ಬೆಂಕಿ ಅವಘಡಕ್ಕೆ ನೀರನ್ನು ಎರಚದೆ, ತಕ್ಷಣವೇ ಮೈನ್ ಸ್ವಿಚ್ ಆಫ್ ಮಾಡಬೇಕು ಹಾಗೂ ಮರಳನ್ನು ಎರಚಬೇಕು. ಗೋಧಿ, ಸೇರಿ ಇತರೆ ಕಾಳುಗಳ ಹಿಟ್ಟುಗಳನ್ನೂ ಬೆಂಕಿ ನಂದಿಸಲು ಬಳಕೆ ಮಾಡಬಹುದು.
4.ಎಲ್‌ಪಿಜಿ ಸೋರಿಕೆಯ ವಾಸನೆ ಬಂದ ಕೂಡಲೇ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು.
1. ಮಾವು/ತೆಂಗು ಸೇರಿ ಯಾವುದೇ ತೋಟಗಳಲ್ಲಿ ಕಳೆ ಹೆಚ್ಚಾಗಿ ಬೆಳೆಯದಂತೆ ಮತ್ತು ಒಣಗಿದ ಕಳೆ /ಹುಲ್ಲು ಇರದಂತೆ ಗಮನ ಹರಿಸಬೇಕು.
2. ಒಣಗಿದ ಎಲೆಗಳನ್ನು ಸಾಧ್ಯವಾದಷ್ಟು ಮಣ್ಣಿನಿಂದ ಮುಚ್ಚಬೇಕು.
3. ಬದುಗಳಲ್ಲಿ ಬೆಳೆದಿರುವ ಕಳೆಯನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಕಿ ಹಾಕಬಾರದು. ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ.
4. ಬೆಂಕಿ ಬಳಕೆ ಮಾಡಿದರೂ ಅದು ನಂದಿ ಹೋಗುವವರೆಗೂ ನಿಗಾ ಇಟ್ಟು ನೋಡಿಕೊಳ್ಳಬೇಕು, ಅದರ ಮೇಲೆ ಮರಳು, ಇಲ್ಲವೇ ನೀರು ಸುರಿಯಬೇಕು.
===
ಬೆಂಕಿ ತಗುಲಿದಾಗ ಅಗ್ನಿಶಾಮಕ ಮತ್ತು ತುರ್ತು ಸೇವೆಗೆ ರಾಮನಗರ ಅಗ್ನಿಶಾಮಕ ಕಚೇರಿ 080-29785101, 9901572819, ಕನಕಪುರ - 080-29761101, 8453702717, ಮಾಗಡಿ - 080-29704446, 9886363537, ಚನ್ನಪಟ್ಟಣ - 080-29721354, 9612566193ಗೆ ಸಂಪರ್ಕಿಸುವುದು.