ವಿಜಯಪುರ: ಶಾಲೆಯ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3ವರ್ಷ ಶಿಕ್ಷೆ ಹಾಗೂ 31 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದ ರಾಜಶೇಖರ ಹಾದಿಮನಿ ಶಿಕ್ಷೆಗೆ ಒಳಗಾದವನು. ಇದೇ ಗ್ರಾಮದ ಮುಖ್ಯ ಶಿಕ್ಷಕ ಹುಸೇನ ಮೀರಸಾಬ ಮಣೂರ ಎಂಬವರು ಹಲ್ಲೆಗೆ ಒಳಗಾಗಿದ್ದರು. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ವಿವರ: 2019ರ ಫೆಬ್ರವರಿ 5ರಂದು ಆರೋಪಿ ರಾಜಶೇಖರ ಹಾದಿಮನಿ ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಮುಖ್ಯ ಶಿಕ್ಷಕ ಹುಸೇನ ಮಣೂರ ಎಂಬವರ ಜತೆ ವಾದಕ್ಕೆ ಇಳಿದು ತಾನೊಬ್ಬ ಹೋರಾಟಗಾರನಾಗಿದ್ದು ವಯಸ್ಸಿನ ಪ್ರಮಾಣ ಪತ್ರ ತಿದ್ದುಕೊಡುವಂತೆ ಬೆದರಿಕೆ ಹಾಕಿದ್ದನು. ಇದಕ್ಕೆ ಮುಖ್ಯ ಶಿಕ್ಷಕ ಒಪ್ಪದಿದ್ದರಿಂದ ಅವರ ಮೇಲೆ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದನು. ಪ್ರಕರಣದ ತನಿಖೆ ನಡೆಸಿದ ಅಂದಿನ ಸಿಂದಗಿ ಪೊಲೀಸ್ ಠಾಣೆಯ ಪಿಎಸ್ ಐ ಶರಣಗೌಡ ಗೌಡರ, ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ನಾಲವಾಡೆ, ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷ ಶಿಕ್ಷೆ ಹಾಗೂ 31 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಂ ವಾದ ಮಂಡಿಸಿದ್ದರು.