ಹಟ್ಟಿಚಿನ್ನದಗಣಿ: ಸಮೀಪದ ಗೊಲಪಲ್ಲಿ ರಾಷ್ಟ್ರೀಯ ಹೆದ್ದಾರಿ 150(ಎ) ತಿರುವಿನಲ್ಲಿ ಬುಧವಾರ ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಕ್ಕೇರಾದಿಂದ ಭತ್ತ ತುಂಬಿದ ಲಾರಿಯೊಂದು ಗೊಲಪಲ್ಲಿ ಬಳಿ ಕೆಟ್ಟು ನಿಂತಿದ್ದು, ಹೊಸಪೇಟೆಯಿಂದ ಕಲಬುರಗಿಗೆ ಸೆಣಬು ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಮುಂಭಾಗ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ, ಎರಡ್ಮೂರು ಗಂಟೆ ಐದು ಕಿಮೀವರೆಗೆ ಸಂಚಾರ ಸಿಕ್ಕು (ಟ್ರಾಫಿಕ್ ಜಾಮ್) ಆಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದ ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಳಿಕ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.
ಬೈಕ್‌ಗೆ ಲಾರಿ ಡಿಕ್ಕಿ: ಇನ್ನೊಂದೆಡೆ ಗುರುಗುಂಟಾ ಬಸ್ ನಿಲ್ದಾಣ ಹತ್ತಿರ ರಾಷ್ಟ್ರೀಯ ಹೆದ್ದಾರಿ150(ಎ) ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್, ಟಾಟಾ ಏಸ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನಿ ಏಕಾಏಕಿ ಮೂರ್ಛೆ ಹೋಗಿದ್ದರಿಂದ ಭತ್ತ ತುಂಬಿದ ಲಾರಿ ರಸ್ತೆಬಿಟ್ಟು ಪಕ್ಕಕ್ಕಿಳಿದಾಗ ನಿಂತಿದ್ದ ಬೈಕ್ ಮತ್ತು ಟಾಟಾಏಸ್‌ಗೆ ಡಿಕ್ಕಿ ಹೊಡೆದಿದ್ದು, ಜಖಂಗೊಂಡಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಎರಡು ಅಪಘಾತಗಳು ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.