ಮಂಗಳೂರು: ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಮತ್ತು ಅವರ ಗಮನಕ್ಕೆ ಬಾರದಂತೆ ನಕಲಿ ದಾಖಲೆ ಸೃಷ್ಟಿಸಿ 31 ಅಸ್ಸಾಂ ಮತ್ತು ಬಿಹಾರ ಮೂಲದ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(ಪಿಸಿಸಿ) ನೀಡಿದ ಪ್ರಕರಣದಲ್ಲಿ ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬ್ರೋಕರ್ ಎಕ್ಕಾರಿನ ಭರತ್ ಮತ್ತು ಪಶ್ಚಿಮ ಬಂಗಾಳ ಮೂಲದ ಬಜಪೆಯಲ್ಲಿ ವಾಸವಿದ್ದ ಆನಂದ ಬಿಸ್ವಾಸ್ ನನ್ನು ಬಂಧಿಸಲಾಗಿತ್ತು. ಕರ್ತವ್ಯ ಲೋಪ ಎಸಗಿದ ಬಜಪೆ ಠಾಣೆಯ ಸಿಬಂದಿ ಕೊರಚರ ಮಂಜುನಾಥ್ ಮತ್ತಯ ಆಶಾ ಫ್ಲೇವಿಯಾ ಕುಟಿನ್ಹ ಅವರನ್ನು ಕಮಿಷನರ್ ಅಮಾನತು ಮಾಡಿದ್ದರು. ಮಂಜುನಾಥನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬಜಪೆ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ಅವರ ದೂರಿನ ಹಿನ್ನೆಲೆಯಲ್ಲಿ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರನ್ನು ತನಿಖಾಧಿಕಾರಿಯಾಗಿ ಕಮಿಷನರ್ ನೇಮಕ ಮಾಡಿದ್ದಾರೆ.
ಕಸ್ಟಡಿಗೆ ಪಡೆದಿರುವ ಆರೋಪಿಗಳನ್ನು ತನಿಖಾಧಿಕಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ಠಾಣೆಯಿಂದ 31 ಮಂದಿ ಪಿಸಿಸಿ ನೀಡಿರುವುದರಿಂದ ಅದನ್ನು ಪಡೆದ ಯುವಕರು ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಲು ದುರುಪಯೋಗ ಪಡಿಸಿದ್ದಾರೆಯೇ ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಬಜಪೆ ಠಾಣೆಯ ಸಿಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.