ಜಮಖಂಡಿ: ನಗರದ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಸಾವಿಗೀಡಾದ ನನ್ನ ಮಗನ ಸಾವಿನಲ್ಲಿ ಸಂಶಯವಿದೆ. ಮಗನ ಸಾವಿಗೆ ನ್ಯಾಯ ಸಿಗಬೇಕೆಂದು ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದ ಮೃತ ವಿದ್ಯಾರ್ಥಿ ಆಕಾಶ ಗುಳೇದಗುಡ್ಡ ಅವರ ತಂದೆ ತಾಯಿ, ಸಂಬಂಧಿಕರು ಕಣ್ಣೀರು ಹಾಕುತ್ತ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟಿಸಿದರು.
ಮಗನ ಸಾವಿನ ಕಾರಣ ತಿಳಿಯಲು ಸಿಸಿಟಿವಿ ದೃಶ್ಯಾವಳಿ ನೀಡದ ಶಾಲೆಯವರು, ಪೊಲೀಸರು ನಮಗೆ ಯಾವುದೇ ಮಾಹಿತಿ ಒದಗಿಸುತ್ತಿಲ್ಲ. ಪೊಲೀಸ್ ಠಾಣೆಗೆ ಹೋದರೆ ದಭಾಯಿಸಿ ಹೊರಹಾಕುತ್ತಿದ್ದಾರೆ ಎಂದು ಮೃತ ವಿದ್ಯಾರ್ಥಿ ತಂದೆ ಅಣ್ಣಪ್ಪ ಗುಳೇದಗುಡ್ಡ, ತಾಯಿ ಸಕ್ಕುಬಾಯಿ ಗುಳೇದಗುಡ್ಡ, ಅಜ್ಜಿ ಲಕ್ಷ್ಮೀಬಾಯಿ ಗುಳೇದಗುಡ್ಡ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಸೆ.23 ರಂದು ಮಧ್ಯಾಹ್ನ ಮಗನಿಗೆ ಆರಾಮ ಇಲ್ಲ ಎಂದು ನಮಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾರೆ. ಆದರೆ, ಇಲ್ಲಿ ಬಂದು ನೋಡಿದರೆ ಸರ್ಕಾರಿ ಆಸ್ಪತ್ರೆ ಕಿಟಕಿಯಿಂದ ಮಗನ ಮೃತ ಶರೀರ ತೋರಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ದೂರಿದರು.
ಹಿಂದೆಯೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾವುಗಳಾಗಿವೆ. ನನ್ನ ಮಗನಿಗಾದಂತೆ ಬೇರೆ ಮಕ್ಕಳಿಗೆ ಆಗಬಾರದೆಂದು ನಾವು ನ್ಯಾಯ ಕೇಳುತ್ತಿದ್ದೇವೆ ಎಂದರು.
ಶಾಲಾ ಹಾಸ್ಟೆಲ್‌ನ ಪ್ರತಿ ಕೊಠಡಿಗೂ ಸಿಸಿಟಿವಿ ಕ್ಯಾಮರಾಗಳಿದ್ದರೂ ನಮಗೆ ದೃಶ್ಯಾವಳಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಈ ಪ್ರಕರಣ ಮುಚ್ಚಿಹಾಕಲು ನಾವು ಬಿಡಲ್ಲ. ಮೇಲಧಿಕಾರಿಗಳ ಕಚೇರಿಗೆ ಹೋಗುತ್ತೇವೆ. ನಮ್ಮ ಮಗ ಓದಿನಲ್ಲಿ, ಶಾರೀರಿಕವಾಗಿ ಸದೃಢನಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದರು.
ಗದರಿಸಿ ಎಬ್ಬಿಸಿದ ಸಿಪಿಐ: ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತ ವಿದ್ಯಾರ್ಥಿ ತಂದೆ, ತಾಯಿ, ಅಜ್ಜಿ, ಸಂಬಂಧಿಕರು ಗ್ರಾಮಿಣ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಪಿಐ ಮಲ್ಲಪ್ಪ ಮಡ್ಡಿ ಏರುಧ್ವನಿಯಲ್ಲಿ ಇದು ಪೊಲೀಸ್ ಠಾಣೆ. ಇಲ್ಲಿ ಕುಳಿತುಕೊಳ್ಳಬೇಡಿ ಎಂದು ದಭಾಯಿಸಿದಾಗ, ನಮ್ಮ ಮಗನ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಏಳಲ್ಲ ಎಂದು ವಿದ್ಯಾರ್ಥಿ ಪಾಲಕರು ಪಟ್ಟುಹಿಡಿದರು. ಆಗ ಸಿಪಿಐ ನಿಮ್ಮದು ಏನಿದೆ ಬರೆದು ಕೊಡಿ, ನಾನೇ ನ್ಯಾಯ ಕೊಡಿಸುವೆ ಎಂದು ಪ್ರತಿಭಟನಾಕಾರರನ್ನು ತಮ್ಮ ಕಚೇರಿಗೆ ಕರೆದೊಯ್ದರು.
ಎಫ್‌ಐಆರ್ ದಾಖಲು: ನಗರದ ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಕಣಬೂರದ ಆಕಾಶ ಅಣ್ಣಪ್ಪ ಗುಳೇದಗುಡ್ಡ(17) ಪ್ರಥಮ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದನು. ತನಗೆ ವಿಜ್ಞಾನ ವಿಷಯ ತಲೆಗೆ ಹತ್ತದೆ ಇದ್ದುದ್ದರಿಂದ ಹಾಗೂ ಕಿಡ್ನಿ ಸ್ಟೋನ್ ಬಗ್ಗೆ ಆಸ್ಪತ್ರೆಗೆ ತೋರಿಸಿದರೂ ಕಡಿಮೆ ಆಗಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ತಾನು ಓದುತ್ತಿದ್ದ ಶಾಲೆಯ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣದಲ್ಲಿ ಬೇರಾವ ಸಂಶಯವಿಲ್ಲ ಎಂದು ಸೆ.23 ರಂದು ಗ್ರಾಮೀಣ ಠಾಣೆ ಪಿಎಸ್‌ಐ ಜಿ.ಎಂ. ಪೂಜಾರ ಪ್ರಕರಣ ದಾಖಲಿಸಿಕೊಂಡಿದ್ದರು.