ಬೆಂಗಳೂರು: ಸಿಎಎ, ಎನ್ಆರ್ಸಿ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಬೆದರಿಕೆ ಹಾಕುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಬೈಕ್ ಕಳ್ಳನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ನ ನಿವಾಸಿ ಅವೇಜ್ (35) ಬಂಧಿತ. ಕಳ್ಳತನ, ದರೋಡೆ ಹಾಗೂ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಬಂಧನಕ್ಕೊಳಗಾಗಿದ್ದ. ಕೆಲ ದಿನಗಳ ಹಿಂದೆ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಡ್ಯಾಗರ್ ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಬೆದರಿಕೆ ಹಾಕಿದ್ದ. ಇದನ್ನು
ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣ ಗಳಲ್ಲಿ ಅಪ್ಲೋಡ್ ಮಾಡಿದ್ದ. ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಿದ್ದರು.
ವಾಹನ ಕದ್ದು ಸಿಕ್ಕಿ ಬಿದ್ದ: ಕಲಾಸಿಪಾಳ್ಯ ನಿವಾಸಿ ರಾಜೇಶ್ವರಿ ಎಂಬುವರು 2019 ನ.9ರ ಬೆಳಗ್ಗೆ 8 ಗಂಟೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕಮರ್ಷಿಯಲ್ ಸ್ಟ್ರೀಟ್ಗೆ ಬಂದಿದ್ದರು. ಜ್ಯುವೆಲರಿ ಸ್ಟ್ರೀಟ್ನಲ್ಲಿ ವಾಹನ ನಿಲ್ಲಿಸಿ, ಸಮೀಪದಲ್ಲಿದ್ದ ಅಂಗಡಿಗಳಿಗೆ ತೆರಳಿದ್ದರು. ಮರಳಿ ಬಂದು ನೋಡಿದಾಗ ತಾವು ನಿಲ್ಲಿಸಿದ್ದ ಸ್ಥಳದಲ್ಲಿ ವಾಹನ ಇರಲಿಲ್ಲ. ಈ ಬಗ್ಗೆ ರಾಜೇಶ್ವರಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳವಾರ ಅವೇಜ್ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಆತನನ್ನು ತಡೆದ ಪೊಲೀಸರು ವಾಹನದ ದಾಖಲೆ ಕೇಳಿದ್ದರು. ಆತ ಈ ದ್ವಿಚಕ್ರವಾಹನವನ್ನು ನ.9ರಂದು ಜ್ಯುವೆಲರಿ ಸ್ಟ್ರೀಟ್ನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ಪೊಲೀಸರು ರಾಜೇಶ್ವರಿ ಅವರನ್ನು ಠಾಣೆಗೆ ಕರೆಯಿಸಿ ವಾಹನ ತೋರಿಸಿದಾಗ ಇದು ತಮ್ಮದೆಂದು ಖಚಿತಪಡಿಸಿ, ದಾಖಲೆ ಒದಗಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.