ವಿಜಯವಾಣಿ ಸುದ್ದಿಜಾಲ ಮ.ಬೆಟ್ಟ
ಕೊಟ್ಟಿಗೆಯಿಂದ ಹಸಿರು ಮೇಯಲು ಹೊರಟ ಕುರಿ ಮಂದೆಗೆ ಇದುವೇ ಸಾರಥಿ, ಮಂದೆಯೊಳಗಿನ ಕುರಿಯೊಂದರ ಮೇಲೆ ಕುಳಿತು ಸವಾರಿ ಮಾಡುತ್ತದೆ ಈ ಕೋತಿ..
ಹನೂರು ತಾಲೂಕಿನ ಚಂಗಡಿ ಗ್ರಾಮದಲ್ಲಿ ಕೋತಿ ಕುರಿಗಾಹಿಯಾಗಿರುವ ವಿಶಿಷ್ಟ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದು.
ಗ್ರಾಮದ ರಾಜೇಗೌಡ ಮನೆಗೆ ಚಿಕ್ಕ ಮರಿಯಾಗಿದ್ದಾಗಲೇ ಬಂದು ಸೇರಿಕೊಂಡ ಕೋತಿ, ಅವರು ಸಾಕಿರುವ ಕುರಿಗಳನ್ನು ಕಾಯುವ ಕೆಲಸ ಮಾಡುತ್ತಿದೆ.
ಬೆಳಗ್ಗೆ ಕುರಿಯೊಂದರ ಮೇಲೆ ಕುಳಿತು ಜಮೀನನ ಕಡೆಗೆ ಮಂದೆಯನ್ನು ಜತೆಗೆ ಕರೆದುಕೊಂಡು ಹೋಗುವ ಕೋತಿ, ಸಂಜೆಯಾಗುತ್ತಿದ್ದಂತೆ ಕುರಿಗಳ ಹಿಂಡನ್ನು ಕೊಟ್ಟಿಗೆಗೆ ಮರಳಿಸುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಕುರಿಗಳು ಮೇಯುವ ವೇಳೆ ಅಪರಿಚಿತರು ಹತ್ತಿರ ತೆರಳಿದರೆ ಗುರಾಯಿಸುತ್ತಾ ಗುರ್ ಎಂದು ಎಚ್ಚರಿಕೆಯನ್ನು ನೀಡುತ್ತದೆ. ಮಂದೆಯೊಳಗೆ ಕುರಿಗಳ ಬೆನ್ನ ಮೇಲೆ ಎಗರುತ್ತಾ ತುಂಟಾಟವನ್ನೂ ಆಡುತ್ತದೆ. ರಾಜೇಗೌಡ ಅವರು ಅನೇಕ ಬಾರಿ ಕೋತಿಯನ್ನು ಕಾಡಿಗೆ ಮರಳಿಸಲು ಪ್ರಯತ್ನಿಸಿದರೂ ಮನೆಗೆ ಮರಳಿದೆ. ಗ್ರಾಮದಲ್ಲಿ ಯಾರೊಬ್ಬರಿಗೂ ತೊಂದರೆ ಕೊಡದ ಹನುಮನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು.