ಜಿಲ್ಲೆ

ರಾತ್ರಿ ಸಂಭ್ರಮದಲ್ಲಿ ತೇಲಿದ್ದ ಸಾಂಸ್ಕೃತಿಕ ನಗರದ ಜನತೆ ಬೆಳಗ್ಗೆ ದೇವರ ದರ್ಶನ ಪಡೆದರು

ಮೈಸೂರು: ಭಾನುವಾರ ರಾತ್ರಿಪೂರ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ತೇಲಿದ್ದ ಸಾಂಸ್ಕೃತಿಕ ನಗರದ ಜನತೆ ಸೋಮವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ಮುಂದಾದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳು, ಚರ್ಚ್‌ಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಹೊಸ ವರ್ಷಾರಂಭದ ದಿನ ನಗರದ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ನಗರದ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಜನಜಾತ್ರೆಯೇ ನೆರೆದಿತ್ತು. ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಚರ್ಚ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಪ್ರಮುಖ ದೇವಾಲಯಗಳು ಬೆಳಗ್ಗೆಯಿಂದಲೇ ತುಂಬಿಹೋಗಿದ್ದು, ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.