ಎನ್.ಮುನಿವೆಂಕಟೇಗೌಡ ಕೋಲಾರ
ಡಿಸೆಂಬರ್ ಪ್ರಾರಂಭದಿಂದಲೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಗಾಗ ಜಡಿ ಮಳೆ, ಮೋಡ ಕವಿದ ವಾತಾವರಣ, ಮಂಜು ಹಾಗೂ ಕೀಟಬಾಧೆಯಿಂದ ಈ ವರ್ಷ ಅವರೆ ಫಸಲು ಇಳಿಮುಖಗೊಂಡಿದೆ. ಫೆಂಗಲ್ ಚಂಡಮಾರುತ ಪ್ರಭಾವದಿಂದ ಅವರೆಕಾಯಿ ಸೊಗಡು ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ರೈತನಿಗೆ ಉತ್ತಮ ಬೆಲೆ ಸಿಗದಂತಾಗಿದೆ.
ಡಿಸೆಂಬರ್-ಮಾರ್ಚ್ ವರೆಗೆ ಅವರೆಕಾಯಿ ಸುಗ್ಗಿ ಪ್ರತಿ ವರ್ಷ ಇರುತ್ತದೆ. ಈ ವರ್ಷ ಡಿಸೆಂಬರ್ನಲ್ಲಿ ಚಂಡಮಾರುತ ಪರಿಣಾಮ ಜಡಿ ಮಳೆ ಮತ್ತು ಶೀತ ಗಾಳಿಯಿಂದಾಗಿ ಅವರೆ ಹೂವು ಉದುರಿದೆ. ಅವರೆಗಿಡ ಹೂವು ಬಿಟ್ಟನಂತರ ಕಾಯಿ ಕಚ್ಚಿದ ಮೇಲೆ ಮಳೆ ಬೀಳದಿದ್ದರೆ ಸೊಗಡು ಹೆಚ್ಚಾಗಿರುತ್ತದೆ. ಆಗ ಕಾಯಿ ಒಳಗಿನ ಬೀಜವೂ ರುಚಿಯಾಗಿರುತ್ತದೆ. ಜಡಿ ಮಳೆಯಿಂದ ರುಚಿಯೂ ಇಲ್ಲದಂತಾಗಿದೆ. ಅವರೆಕಾಯಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂ.ಇದ್ದು, ರೈತರಿಗೆ ಪ್ರತಿ ಕೆಜಿಗೆ 35 ರಿಂದ 40 ರೂ. ಸಿಗುತ್ತಿದೆ.
ಬಗೆ ಬಗೆಯ ತಿಂಡಿಗಳು: ಅವರೆಕಾಯಿಂದ ಹಿದುಕಿದ ಬೇಳೆಸಾರು, ಉಪ್ಪಿಟು, ಪಲ್ಯ, ನಿಪ್ಪಟ್ಟು, ಚಕ್ಕುಲಿ, ವಡೆ, ಹೋಳಿಗೆ, ಸಿಹಿ ಸಾಂಬಾರ್, ದೋಸೆ ಸೇರಿ ಬಗೆ ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ವರ್ಷದಲ್ಲಿ ಕೇವಲ 4 ತಿಂಗಳ ಕಾಲ ಅವರೆ ಕಾಯಿ ಸುಗ್ಗಿ ಇರುವುದರಿಂದ ಅದನ್ನೇ ವರ್ಷ ಪೂರ್ತಿ ಬಳಸಿಕೊಳ್ಳಲಾಗುತ್ತಿದೆ.
ಪ್ರಾರಂಭದಲ್ಲಿ ಹೂವು ಬಿಟ್ಟು ಕಾಯಿಯಾಗಿರುವ ಅವರೆಕಾಯಿಯ ಮೇಲೆ ಸೊಗಡು ಇಲ್ಲದಂತಾಗಿದೆ. ಬೆಳೆ ಬರುವ ಹೊತ್ತಿನಲ್ಲಿ ಜಡಿ ಮಳೆ ಪ್ರಭಾವ, ಹೂವು ಬಿಟ್ಟು ಕಾಯಿ ಕಚ್ಚಿದ ಮೇಲೆ ಅವರೆಕಾಯಿ ಫಸಲಿನ ಮೇಲೆ ಮಳೆ ಬೀಳಬಾರದು, ಮಳೆ ಬಿದ್ದ ಪರಿಣಾಮ ಫಸಲಿಗೆ ಧಕ್ಕೆ ಉಂಟಾಗಿದೆ. ಇನ್ನು ಹೂವು ಬಿಟ್ಟು ಕಾಯಿ ಕಚ್ಚಿದರೆ ಅವರೆಕಾಯಿಯ ಮೇಲೆ ಸೊಗಡು ಉಳಿಯುವಂತಾಗುತ್ತದೆ. ಇನ್ನೂ 3 ತಿಂಗಳ ಕಾಲ ಫಸಲು ಇರುತ್ತದೆ. ಭೂಮಿಯಲ್ಲಿ ತೇವಾಂಶ ಇರುವುದರಿಂದ ಗಿಡ ಚಿಗುರಿ ಮತ್ತೆ ಹೂವು ಬರುತ್ತದೆ. ಕಾಯಿ ಕಚ್ಚುತ್ತದೆ. - ನಾರಾಯಣಗೌಡ ರೈತ ಕೆಂಬೋಡಿ ಡಿಸೆಂಬರ್ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅವರೆ ಗಿಡದಲ್ಲಿ ಬಿಟ್ಟ ಹೂವು ಉದುರಿ ಫಸಲು ಕಡಿಮೆಯಾಗಿದೆ. ರೈತರು ಆತುರ ಬಿದ್ದು, ಋತುವಿಗೆ ಬಾರದೆ ಇರುವ ಕಾಯಿ ಕೀಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ. ವ್ಯಾಪಾರಸ್ಥರು ಮಾತ್ರ ಒಂದೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತ ಬಂಡವಾಳ ಹಾಕಿ ಬೆಳೆದರೂ ಬೆಲೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಸರಕು ಮಾರುಕಟ್ಟೆಗೆ ಕೊಟ್ಟರೆ ಉತ್ತಮ ಬೆಲೆ ಪಡೆಯಬಹುದು. ಮಂಜು ಮತ್ತು ಚಳಿ ಪ್ರಾರಂಭವಾಗಿದೆ. ಇನ್ನು ಮುಂದೆ ಮಾರುಕಟ್ಟೆಗೆ ಬರುವ ಅವರೇಕಾಯಿಯಲ್ಲಿ ಸೊಗಡು ಇರುತ್ತದೆ. - ಚಂದ್ರಶೇಖರ್ ಪ್ರಗತಿಪರ ರೈತ ನೆನುಮನಹಳ್ಳಿ