ಡಾ.ರಾಜಕುಮಾರ್​ ಜನ್ಮದಿನದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಜಿಲ್ಲಾಡಳಿತದಿಂದ ರಾಜರತ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿ.ಬಿ.ಜ್ಯೋತಿಗಣೇಶ್​, ಡಾ.ಲಕ್ಷ್ಮಣದಾಸ್​, ರೂಪಕಲಾ, ಸಿದ್ದಲಿಂಗಪ್ಪ, ಡಾ.ಶ್ರಾವ್ಯಾ ಇದ್ದರು. 
ಜಿಲ್ಲೆ

ಅಣ್ಣಾವ್ರ ನಟನೆಗೆ ಅವರೇ ಸಾಟಿ

ತುಮಕೂರು ಡೆಸ್ಕ್

ಶಾಸಕ ಜ್ಯೋತಿಗಣೇಶ್​ ಬಣ್ಣನೆ - ರಾಜರಸ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟನೆ

ತುಮಕೂರು: ವರನಟ, ನಟ ಸಾರ್ವಭೌಮ ಡಾ.ರಾಜ್​ಕುಮಾರ್​ ಅವರು ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸತಿಕ ಲೋಕದ ರಾಯಭಾರಿಯಾಗಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅವರು ಕೊಡುಗೆ ಗಣ್ಯವಾಗಿದೆ

ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್​ ಬಣ್ಣಿಸಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ "ರಾಜರಸ' ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಡಾ.ರಾಜ್​ ಅವರು ಅಭಿನಯಿಸದ ಪಾತ್ರಗಳಿಲ್ಲ. ಕರ್ನಾಟಕದಲ್ಲಿ ಡಾ.ರಾಜ್​ಕುಮಾರ್​ ಎಂದರೆ ಅಣ್ಣಾವ್ರು ಎಂದೇ ಪ್ರಸಿದ್ಧಿ. ಅವರ ಚಿತ್ರಗಳು ಇಡೀ ಕುಟುಂಬ ಒಟ್ಟಿಗೇ ಕುಳಿತು ವೀಕ್ಷಿಸುವಂತಹದಾಗಿದ್ದವು. ಅವರು ನಟಿಸಿರುವ ಚಿತ್ರದ ಗೀತೆಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿದ್ದವು. ಅಣ್ಣಾವ್ರ ನಟನೆ ಹಾಗೂ ಗಾಯನಕ್ಕೆ ಅವರೇ ಸಾಟಿ ಎಂದರು.

ರಾಜ್​ಕುಮಾರ್​ ಅವರು ಗೋಕಾಕ್​ ಚಳವಳಿಯ ನೇತೃತ್ವ ವಹಿಸುವ ಮೂಲಕ ಕನ್ನಡ ನಾಡು-ನುಡಿಯ ಏಳಿಗೆಗಾಗಿ ಹೋರಾಟ ಮಾಡಿದ ಅಪ್ಪಟ

ಕನ್ನಡಿಗರಾಗಿದ್ದರು. ಕನ್ನಡ ಹೊರತುಪಡಿಸಿ ಇತರ ಯಾವುದೇ ಭಾಷೆಗಳಲ್ಲಿ ನಟಿಸದೆ ಕನ್ನಡಿಗರಿಗೆ ಮಾದರಿಯಾಗಿದ್ದರು. ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಡಾ.ರಾಜ್​ಕುಮಾರ್​ ಜಯಂತಿ ಇಂದಿನ ಯುವಕರಿಗೆ ದಾರಿ ದೀಪವಾಗಬೇಕು ಎಂದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಡಾ.ರಾಜ್​ಕುಮಾರ್​ ಅವರು ಸರಳ ಹಾಗೂ ಮೇರು ವ್ಯಕ್ತಿತ್ವ ಹೊಂದಿದ್ದರು. ಹೆಚ್ಚೇನು ವ್ಯಾಸಂಗ ಮಾಡದಿದ್ದರೂ ನಿರರ್ಗಳ ಕನ್ನಡದ ಮಾತುಗಳಿಂದ ವಾಗ್ದೇವಿ ಪುತ್ರರೆನಿಸಿಕೊಂಡಿದ್ದರಲ್ಲದೆ ಕನ್ನಡಾಭಿಮಾನದಿಂದ

ರಾಷ್ಟ್ರದ ಗಮನ ಸೆಳೆದಿದ್ದರು ಎಂದರು.

ರಾಜ್​ ಅವರ ಚಲನಚಿತ್ರ ಪಯಣ ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ಪ್ರಾರಂಭವಾಯಿತೆಂದು ಹೇಳಲು ಹೆಮ್ಮೆಯಾಗುತ್ತದೆ. ತಮ್ಮ ಕಲೆ ಮೂಲಕ ಸಮಾಜದ ಅಂಕು-&ಡೊಂಕುಗಳನ್ನು ತಿದ್ದಿದ್ದರು. ದಾದಾ ಸಾಹೇಬ್​ ಫಾಲ್ಕೆ, ಪದ್ಮಭೂಷಣದಂತಹ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು ಎಂದರು.

ನಟನೆಯಲ್ಲದೆ ಸಂಗೀತ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದ್ದವು. ರಾಷ್ಟ್ರದಲ್ಲಿ ತ್ರಿಭಾಷಾ ನೀತಿ ಘೋಷಣೆಯಾದ ಸಂದರ್ಭದಲ್ಲಿ ಗೋಕಾಕ್​ ಚಳವಳಿ ಮೂಲಕ ಆಯಾ ಪ್ರಾದೇಶಿಕ ಭಾಷೆಯೇ ಮಾತೃಭಾಷೆಯಾಗಬೇಕೆಂದು ಹೋರಾಟ ನಡೆಸಿ ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮಾತನಾಡಿ, ಡಾ.ರಾಜ್​ ಅವರು ಸ್ವಯಂ ಸಾಧಕ. ಯಾವುದೇ ಬೆಂಬಲವಿಲ್ಲದೆ ಕಠಿಣ ಶ್ರಮದಿಂದ ಉನ್ನತ ಸ್ಥಾನಕ್ಕೇರಿ ಕನ್ನಡಿಗರ ಜನಮಾನಸದಲ್ಲಿ ಉಳಿದಿದ್ದಾರೆ. ಸಂಗೀತ ಹಾಗೂ ನಟನೆಯನ್ನು ಜತೆ ಜತೆಗೆ ತೊಡಗಿಸಿಕೊಂಡ ಬಹುಮುಖ ಪ್ರತಿಭೆ ಹೊಂದಿರುವ ಕನ್ನಡಿಗರಲ್ಲಿ ಇವರು ಅಗ್ರಗಣ್ಯರು ಎಂದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರಪ್ರಶಸ್ತಿ ಪುರಸತ ಡಾ.ಲಕ್ಷ$್ಮಣದಾಸ್​ ಮಾತನಾಡಿ, ಡಾ.ರಾಜ್​ಕುಮಾರ್​ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ದೀರ್ಘ ಕಾಲ ನಾಟಕಗಳಲ್ಲಿ ಅಭಿನಯಿಸಿದ ನಂತರ ಚಿತ್ರರಂಗಕ್ಕೆ ಪ್ರವೇಶಿಸಿದರು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಮೊದಲ ಅವಕಾಶ ಪಡೆದರು. ರಾಜ್​ಕುಮಾರ್​ ಅವರು 220 ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಡಾ.ರಾಜ್​ಕುಮಾರ್​ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ನಟನೆ, ಗಾಯನ ಮತ್ತು ಚಿತ್ರ ನಿಮಾರ್ಣದ ಮೂಲಕ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳನ್ನು ಪಡೆದುಕೊಂಡು ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು ಎಂದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು, ಕಾರ್ಯಕ್ರಮ ಸಂಯೋಜಕ ಕೆ.ರಾಜಶೇಖರ್​, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ಧಲಿಂಗಪ್ಪ, ಗಾಯಕಿ ಡಾ.ಶ್ರಾವ್ಯಾ, ವಾರ್ತಾ ಇಲಾಖೆಯ ಆರ್​.ರೂಪಕಲಾ ಇದ್ದರು.