ಮೈಸೂರು: ಅವರಿಗೆ ಮಾಡಲು ಕೆಲಸವಿಲ್ಲ, ಅನಗತ್ಯವಾಗಿ ಚರ್ಚೆ ಮಾಡುವವರಿಗೆಲ್ಲ ಉತ್ತರ ಕೊಡುವ ಅಗತ್ಯ ನಮಗಿಲ್ಲ. ಕೇಂದ್ರ ಸಚಿವರು ತಮ್ಮ ಘನತೆ, ಗೌರವ ಉಳಿಸಿಕೊಂಡು ಮಾತನಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಕೃಷಿ ಸಚಿವ ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದರೆ ಸಹಿಸಲು ಸಾಧ್ಯವಿಲ್ಲ. ಸ್ಟಿಂಗ್ ಆಪರೇಷನ್ ವಿಚಾರವಾಗಿ ತನಿಖೆ ಪ್ರಾರಂಭವಾಗಿದೆ. ಸತ್ಯಾಸತ್ಯತೆ ಏನೆಂಬುದು ತನಿಖೆ ಪೂರ್ಣಗೊಂಡ ಬಳಿಕ ಜಗತ್ತಿಗೆ ತಿಳಿಯಲಿದೆ. ಮೊದಲು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ನಾವು ಯಾರಿಗೂ ಅಂಜೋದಿಲ್ಲ, ಅಳುಕುವುದಿಲ್ಲ. ಕುಚೋದ್ಯ ಮಾಡುವವರಿಗೆ ನಾವು ಉತ್ತರ ಕೊಡುವುದಿಲ್ಲ. ಅಭಿವೃದ್ಧಿ, ಜನಪರ ಕಾಳಜಿ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಇಂತಹ ಆರೋಪಗಳಿಗೆ ಸೊಪ್ಪು ಹಾಕಬಾರದು, ಇಂತಹ ವಿಚಾರಗಳಿಗೆ ಮಹತ್ವವನ್ನೂ ಕೊಡಬಾರದು. ನಮ್ಮ ನಾಯಕರು, ನಾಯಕತ್ವದ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಹೇಳಿದರು.