ಜಿಲ್ಲೆ

ಗಗನ ಕುಸುಮವಾದ ಸರ್ಕಾರದ ಪರಿಹಾರ

Mysuru

ಮೈಸೂರು: ಲಾಕ್‌ಡೌನ್‌ನಿಂದ ತೊಂದರೆಗೀಡಾಗಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಅದು ಚಾಲಕರ ಕೈ ಸೇರುವುದು ಈಗ ಗಗನ ಕುಸುಮವಾಗಿದೆ.

ಸರ್ಕಾರ ಘೋಷಿಸಿದ ಹಣ ಪಡೆಯಲು ಹಲವು ಷರತ್ತು ವಿಧಿಸಲಾಗಿದ್ದು, ಆ ಎಲ್ಲ ಷರತ್ತು ಪೂರ್ಣಗೊಳಿಸಬೇಕಾದಾರೆ ಚಾಲಕರು, ಆಟೋದ ಮಾಲೀಕರಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿ ಸರ್ಕಾರ ಘೋಷಿಸಿರುವ ಪರಿಹಾರದ ಹಣ ಆಟೋ ಮಾಲೀಕರಾಗಿರುವ ಚಾಲಕರಿಗೆ ಮಾತ್ರ ಸಿಗುತ್ತದೆಯೇ ಹೊರತು, ಬಾಡಿಗೆ ಆಧಾರದ ಮೇಲೆ ಆಟೋ ಚಾಲನೆ ಮಾಡುವವರಿಗೆ ದೊರೆಯುವುದು ಕಷ್ಟ ಎನ್ನಲಾಗುತ್ತಿದೆ.

ಪರಿಹಾರ ಘೋಷಣೆ ಮಾಡಿದ್ದರೂ ಅದಕ್ಕೆ ನೀತಿ ರೂಪಿಸಿ, ‘ಸೇವಾಸಿಂಧು’ ಆ್ಯಪ್ ಸಿದ್ಧಪಡಿಸಲೇ ಸಾಕಷ್ಟು ದಿನ ತೆಗೆದುಕೊಳ್ಳಲಾಯಿತು. ಮೂರು ದಿನಗಳಿಂದ ಮಾಹಿತಿ ಅಪ್‌ಲೋಡ್ ಮಾಡಿ ಅರ್ಜಿ ಭರ್ತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಈಗ ಮಾಹಿತಿ ಅಪ್‌ಲೋಡ್ ಮಾಡಲು ಆರಂಭಗೊಂಡ ಬಳಿಕ ಒಂದೊಂದೆ ಸಮಸ್ಯೆಗಳು ಎದುರಾಗುತ್ತಿದ್ದು, ಶೇ.10ರಿಂದ 15ರಷ್ಟು ಚಾಲಕರಿಗೂ ಉಪಯೋಗವಾಗುವುದಿಲ್ಲ. ಹಾಗಾಗಿ ಇದು ಚಾಲಕ ಸ್ನೇಹಿ ಘೋಷಣೆಯಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಬ್ಯಾಡ್ಜ್ ಇದ್ದರೂ ಹಣವಿಲ್ಲ: ಬಹುತೇಕ ಆಟೋ ಚಾಲಕರು, ದಿನದ ಬಾಡಿಗೆ ಆಧಾರದ ಮೇಲೆ ಮಾಲೀಕರಿಂದ ಆಟೋ ಪಡೆದು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಈಗ ಸರ್ಕಾರ ವಿಧಿಸಿರುವ ಷರತ್ತಿನಲ್ಲಿ ಆಟೋ ಸಂಖ್ಯೆ, ಚಾರ್ಸಿ ಸಂಖ್ಯೆ, ಫಿಟ್‌ನೆಸ್ ಸರ್ಟಿಫಿಕೇಟ್ (ಎಫ್‌ಸಿ), ಡಿಎಲ್, ಬ್ಯಾಡ್ಜ್ ಸಂಖ್ಯೆಯನ್ನು ಅಪ್‌ಲೋಡ್ ಮಾಡಬೇಕು. ಡಿಎಲ್, ಬ್ಯಾಡ್ಜ್ ಸಂಖ್ಯೆ ಚಾಲಕರು ಅಪ್‌ಲೋಡ್ ಮಾಡಿದರೂ ಆಟೋ ಸಂಖ್ಯೆ, ಚಾರ್ಸಿ, ಎಫ್‌ಸಿ ಸಂಖ್ಯೆ ಮಾಲೀಕರ ಬಳಿ ಇರುತ್ತದೆ. ಸಾಫ್ಟ್‌ವೇರ್‌ನಲ್ಲಿ ಒಂದು ಮಾಹಿತಿ ಇಲ್ಲದಿದ್ದರೂ ಅದು ಅಪೂರ್ಣಗೊಳ್ಳುತ್ತಿದೆ. ಹೀಗಾಗಿ ಚಾಲಕರು ಬ್ಯಾಡ್ಜ್ ಇದ್ದರೂ ಪರಿಹಾರ ಪಡೆಯಲು ಸಾಧ್ಯವಿಲ್ಲದಂತಾಗಿದೆ.

ಲಾಕ್‌ಡೌನ್ ಮಾರ್ಚ್ 23ರಿಂದ ಆರಂಭಗೊಂಡಿದೆ. ಆದರೆ, ಸರ್ಕಾರ ವಿಧಿಸಿರುವ ಷರತ್ತಿನಲ್ಲಿ ಮಾರ್ಚ್ 24ರವರೆಗೆ ಎಫ್‌ಸಿ, ಚಾಲನಾ ಪರವಾನಗಿ ಚಾಲ್ತಿಯಲ್ಲಿರಬೇಕು ಎಂಬ ನಿಯಮವಿದೆ. ಏಪ್ರಿಲ್, ಮೇ ತಿಂಗಳಲ್ಲಿ ಹಲವರ ಚಾಲನಾ ಪರವಾನಗಿ, ಎಫ್‌ಸಿ ಅವಧಿ ಮುಗಿದಿದೆ. ಇವರಿಗೆ ಏನು ಪರಿಹಾರ ಎಂದು ಹೇಳಿಲ್ಲ. ಈ ಹಿಂದೆ ಅವಧಿ ಮುಗಿದಿದ್ದರೂ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದರೂ ಅದು ಸಾಫ್ಟ್‌ವೇರ್‌ನಲ್ಲಿ ಕಾಣುತ್ತಿಲ್ಲ.

ಸಾರಿಗೇತರ (ಎಸ್‌ಟಿ) ಚಾಲನಾ ಪರವಾನಗಿ ಪಡೆದ ಒಂದು ವರ್ಷದ ಬಳಿಕ ಸಾರ್ವಜನಿಕ ಸಾರಿಗೆ ಪ್ರಮಾಣ ಪತ್ರ (ಪಿಎಸ್‌ಸಿ-ಬ್ಯಾಡ್ಜ್) ನೀಡಲಾಗುತ್ತದೆ. ಹಲವು ಚಾಲಕರಿಗೆ ಇನ್ನೂ ಒಂದು ವರ್ಷ ಅವಧಿ ಪೂರ್ಣಗೊಳ್ಳದೆ ಇರುವುದರಿಂದ ಬ್ಯಾಡ್ಜ್ ಪಡೆದಿಲ್ಲ. ಇಂತಹ ಚಾಲಕರಿಗೆ ಏನು ಪರಿಹಾರ ಎನ್ನುವ ಮಾಹಿತಿ ಇಲ್ಲ.

ಕೆಲವರು ಆಟೋಗಳನ್ನು ಖರೀದಿಸಿದ್ದರೂ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಅಗ್ರಿಮೆಂಟ್ ಆಧಾರದ ಮೇಲೆ ಆಟೋವನ್ನು ತಮ್ಮ ವಶಕ್ಕೆ ಪಡೆದು ಚಾಲನೆ ಮಾಡುತ್ತಿರುತ್ತಾರೆ. ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿದರೆ ಮೂಲ ಮಾಲೀಕರ ಹೆಸರೇ ಬರುವುದರಿಂದ ಆಟೋ ಖರೀದಿಸಿದ ಮಾಲೀಕರಿಗೆ ಪರಿಹಾರ ದೊರೆಯದಂತಾಗಿದೆ.

ತೊಂದರೆಗೆ ಒಳಗಾದವರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇತರ ವೃತ್ತಿಗಳಿಗೆ ವಿಧಿಸದ ಷರತ್ತನ್ನು ಆಟೋ ಚಾಲರಿಗೆ ಮಾತ್ರ ವಿಧಿಸಲಾಗಿದೆ. ಈ ಷರತ್ತು ನೋಡಿದರೆ ನಿಜವಾದ ಚಾಲಕರಿಗೆ ಪರಿಹಾರ ದೊರೆಯುವುದಿಲ್ಲ. ಆದ್ದರಿಂದ ಆಟೋಗಾಗಿ ಪಡೆದಿರುವ ಡಿಎಲ್, ಆಧಾರ್, ಬ್ಯಾಂಕ್ ಅಕೌಂಟ್ ಆಧಾರದ ಮೇಲೆ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ.
ಎಂ.ಮಹದೇವಸ್ವಾಮಿ ಅಧ್ಯಕ್ಷರು, ಮೈಸೂರು ಆಟೋ ಚಾಲಕರ ಸಂಘ