ಬೆಂಗಳೂರು: ಬದಲಾದ ಜಗತ್ತಿನ ಅವಶ್ಯಕತೆಗಳಿಗನುಗುಣವಾಗಿ ವೃತ್ತಿ ಕೌಶಲ್ಯತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಇನ್ಫೋಸಿಸ್ ಸಹಾಯಕ ಉಪಾಧ್ಯಕ್ಷರು ಹಾಗೂ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಸುಂದರ್ ಕೆ.ಎಸ್. ಹೇಳಿದರು.
ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಡಾನ್ ಬಾಸ್ಕೋ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ‘ವಿಸ್ಮಯ 2ಕೆ 24’ ಕ್ಕೆ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಬದಲಾದ ವೃತ್ತಿ ಕೌಶಲ್ಯತೆ, ಬದಲಾದ ಕೆಲಸದ ಜಾಗ ಹಾಗೂ ಕೆಲಸದ ಒತ್ತಡ ಈ ಮೂರು ಅಂಶಗಳ ಬಗ್ಗೆ ಗಮನವಿಟ್ಟು, ಅವುಗಳಿಗೆ ಬೇಕಾದ ಕೌಶಲ್ಯತೆಯನ್ನು ತಮ್ಮೊಳಗೆ ಬೆಳಸಿಕೊಳ್ಳಬೇಕು. ಆ ಮೂಲಕ ಸ್ಪರ್ಧಾತ್ಮಕ ವೃತ್ತಿ ಜಗತ್ತಿನಲ್ಲಿ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಪುರಸ್ಕಾರ ನೀಡಿದರು.
ಕ್ಯಾಪ್‌ಜೆಮಿನಿ ಇಂಜಿನಿಯರಿಂಗ್ ಸೇವೆಗಳ ಉಪಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ನಾವು ಮೊದಲು ಗ್ರಾಹಕರ ಹಾಗೂ ಸಾಮಾನ್ಯ ಜನತೆಯ ಸಮಸ್ಯೆಯನ್ನು ಅರ್ಥೈಸಿಕೊಂಡು, ತಂತ್ರಜ್ಞಾನ ಬಳಕೆಯಿಂದ ಉತ್ತರ ಕಂಡುಕೊಳ್ಳಬೇಕು. ಯುವಜನತೆ ತಾಳ್ಮೆಯಿಂದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಹವ್ಯಾಸ ಬೆಳೆಯಬೇಕು ಎಂದರು.
ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ‘ನೆನಪಿರಲಿ ಪ್ರೇಮ್’ ಪಾಲ್ಗೊಂಡು ಕಾಲೇಜು ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಬರಹಗಾರರಾದ ಎಂ.ಎಸ್ ನರಸಿಂಹಮೂರ್ತಿ, ವಯಾನಮಾಕ್ ಟ್ರಸ್ಟ್‌ನ ಮುಖ್ಯಸ್ಥರಾದ ಬೈಲಪ್ಪ, ಕಾರ್ಯಕಾರಿ ನಿರ್ದೇಶಕರಾದ ಮಂಜುನಾಥ್ ಬಿ, ಕಾರ್ಯದರ್ಶಿಗಳಾದ ರಾಘವ ಬೈಲಪ್ಪ, ಪ್ರಾಂಶುಪಾಲರಾದ ಡಾ.ನಾಗಭೂಷಣ ಬಿ.ಎಸ್. ನಿರ್ದೇಶಕರಾದ ಡಾ. ನಟರಾಜ್ ಕೆ. ಆರ್. ಕಾರ್ಯಕ್ರಮ ಸಂಚಾಲಕರಾದ ಡಾ. ಗೌರಮ್ಮ ಉಪಸ್ಥಿತರಿದ್ದರು.