ಮೂಡಿಗೆರೆ: ಮಳೆ, ಚಳಿ, ಗಾಳಿ ಸೇರಿದಂತೆ ಯಾವುದೇ ಕ್ಲಿಷ್ಟಕರ ವಾತಾವರಣವನ್ನು ಭೇದಿಸಿ ಸಾರ್ವಜನಿಕ ಭದ್ರತಾ ಕಾರ್ಯ ನಡೆಸುವ ಪೊಲೀಸರು ಸರ್ಕಾರಿ ಶಾಲೆಗೆ ವಿವಿಧ ಪರಿಕರಗಳನ್ನು ನೀಡಿ, ಸಮಾಜಮುಖಿ ಸೇವೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ 2008ರಲ್ಲಿ 88 ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆ ನೇಮಕಾತಿಗೆ ಬಂದ ಪೊಲೀಸ್ ತಂಡದವರು ಪ್ರತಿವರ್ಷ ತಮ್ಮ ದುಡಿಮೆಯ ಒಂದಷ್ಟು ಮೊತ್ತವನ್ನು ಉಳಿತಾಯ ಮಾಡಿ ಸರ್ಕಾರಿ ಶಾಲೆ, ಅನಾಥಾಶ್ರಮ, ಆಸ್ಪತ್ರೆ ಸೇರಿದಂತೆ ಸಮುದಾಯದ ವಿವಿಧ ಕೇಂದ್ರಗಳಿಗೆ ನೆರವು ನೀಡುತ್ತಿದ್ದಾರೆ.
88 ಜನರ ಪೊಲೀಸರ ತಂಡದಲ್ಲಿ ಕೆಲವರು ಬೇರೆ ಇಲಾಖೆಗಳಿಗೆ ನೇಮಕಾತಿಯಾಗಿದ್ದರೂ ಪೊಲೀಸ್ ತಂಡದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. 2024-25ನೇ ಸಾಲಿನಲ್ಲಿ ಈ ತಂಡದವರು ತಾಲೂಕಿನ ಗಡಿಗ್ರಾಮ ಗೋಣಿಬೀಡು ಸಮೀಪದ ಜಿ.ಅಗ್ರಹಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ, ಸ್ಮಾರ್ಟ್ ಕಾಸ್ ಬಳಕೆಯ ಟಿವಿ, ಬೆಂಚ್, ಬಿಸಿಯೂಟಕ್ಕೆ ತಟ್ಟೆ, ಟೇಬಲ್, ಬೆಲ್, ಚಿಣ್ಣರ ನಲಿಕಲಿ ಟೇಬಲ್ ಹಾಗೂ ಚೇರ್, ಗ್ರೀನ್‌ಬೋರ್ಡ್, ಮಿಕ್ಸಿ, ಅಡುಗೆ ಬೇಕಾದ ಪರಿಕರ ಸೇರಿದಂತೆ 70 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಪೊಲೀಸರು ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರೂ ಅವರ ಬಗ್ಗೆ ಕೊಂಕು ಮಾತನಾಡುವವರು ಹೆಚ್ಚು. ತಮಗೆ ಬಂದ ವೇತನದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕಡೆ ದುರ್ಬಲರಿಗೆ ಸಹಾಯ ನೀಡಲು ಮುಂದಾಗಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಕುಗ್ರಾಮವೊಂದರ ಸರ್ಕಾರಿ ಶಾಲೆಗೆ ವಿವಿಧ ಪರಿಕರಗಳನ್ನು ನೀಡಿ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ.