ಜಿಲ್ಲೆ

ನೀನೇ ನನ್ನ ಜೀವ ಎಂದ, ಮದ್ವೆ ಬಳಿಕ ಕೆ.ಜಿ. ಚಿನ್ನ ಬೇಕೆಂದ!; ಹೈ ಪ್ರೊಫೈಲ್​, ಲೈಫೆಲ್ಲ ಟ್ರಬಲ್​...

vinaymk1969

| ರವಿ ಗೋಸಾವಿ ಬೆಳಗಾವಿ

ಬಹುರಾಷ್ಟ್ರೀಯ ಕಂಪನಿ ಉದ್ಯೋಗ, ಕೈತುಂಬ ಸಂಬಳ, ವಿದೇಶದಲ್ಲಿ ದೊಡ್ಡ ಬಂಗಲೆಯಲ್ಲಿ ಜೀವನ... ಇಂತಹ ಆಕರ್ಷಕ ಪ್ರೊಫೈಲ್​ಗಳನ್ನು ಕುರುಡಾಗಿ ನಂಬುವ ಪಾಲಕರು ಕಣ್ಮುಚ್ಚಿಕೊಂಡು ಮದುವೆ ಶಾಸ್ತ್ರ ಮುಗಿಸುತ್ತಾರೆ. ಆದರೆ, ಬಳಿಕ ಅಸಲಿಯತ್ತು ತಿಳಿದು ಕಣ್ಣೀರಿಡುತ್ತಿರುವ ಹತ್ತಾರು ಪ್ರಕರಣಗಳು ಈಗಾಗಲೇ ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಈ ಸಾಲಿಗೆ ಬೆಳಗಾವಿಯ 2 ಕೇಸ್​ಗಳ ಸೇರ್ಪಡೆಯಾಗಿದೆ.

ಪಾಲಕರಿಗೂ ಪಾಠ: ದುಬೈನಲ್ಲಿ ಇಂಜಿನಿಯರ್ ಆಗಿದ್ದ ಶಿವಮೊಗ್ಗ ಮೂಲದ ಯುವಕನ ಪ್ರೊಫೈಲ್ ನೋಡಿದ್ದ ಬೆಳಗಾವಿಯ ದಂಪತಿ ಹಿಂದೆಮುಂದೆ ವಿಚಾರಿಸದೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಬಳಿಕ ಆಕೆಯನ್ನು ತನ್ನೊಂದಿಗೆ ಕರೆದೊಯ್ದ ಆತ, ಸಿಗರೇಟ್​ನಿಂದ ಸುಡುವುದು, ಮದ್ಯಪಾನ ಹಾಗೂ ಡ್ರಗ್ಸ್ ಸೇವಿಸುವಂತೆ ಒತ್ತಾಯ ಮಾಡುತ್ತಿದ್ದ. ದೈಹಿಕ ದೌರ್ಜನ್ಯವೆಸಗುತ್ತಿದ್ದ. ಇದರಿಂದ ಯುವತಿ ಮಾನಸಿಕ ಅಸ್ವಸ್ಥಳಂತಾಗಿದ್ದಾಳೆ. ತಾವೇ ವರನ ಪ್ರೊಫೈಲ್ ನೋಡಿ ಮಾಡಿದ ಮದುವೆಯಿಂದ ಮಗಳ ಬಾಳು ಹಾಳಾಯಿತು ಎಂದು ಪಾಲಕರು ಕಣ್ಣೀರಿಡುತ್ತಿದ್ದಾರೆ. ಇದಲ್ಲದೆ, ಇನ್ನೊಂದು ಬಗೆಯ ಮೋಸಜಾಲವೂ ಇದೆ. ಉದ್ಯೋಗದಲ್ಲಿರುವ ಯುವತಿಯರನ್ನು ಟಾರ್ಗೆಟ್ ಮಾಡಿ ಪ್ರೀತಿಯ ಸೋಗಿನಲ್ಲಿ ಬಲೆ ಬೀಸಿ ಮದುವೆ ಯಾಗುವುದು; ಬಳಿಕ ಪತ್ನಿಯ ಸಂಬಳದಲ್ಲೇ ದಿನದೂಡು ವುದು; ಆಕೆಯ ಹೆಸರಲ್ಲಿ ಲಕ್ಷಾಂತರ ಸಾಲ ಮಾಡಿ ವಂಚಿಸುವುದು- ಇಂಥ ಪ್ರಕರಣಗಳೂ ವರದಿಯಾಗುತ್ತಿವೆ.

ಫೋಟೋ ನೋಡಿ ಮೋಸಹೋಗದಿರಿ: ಹೆಣ್ಮಕ್ಕಳನ್ನಷ್ಟೇ ಅಲ್ಲ, ಯುವಕರನ್ನೂ ಹನಿಟ್ರ್ಯಾಪ್​ ಮಾಡಿ ವಂಚಿಸುತ್ತಿರುವ ಪ್ರಕರಣಗಳಿವೆ. ಸೆಲೆಬ್ರಿಟಿಗಳ ಪಾರ್ಟಿಗಳಲ್ಲಿರುವಂತೆ ಆಕರ್ಷಕ ಫೋಟೋ ಬಳಸಿ, ನಕಲಿ ಹೆಸರು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಅಪ್ಲೋಡ್ ಮಾಡುವ ಯುವತಿಯರು ಪುರುಷರನ್ನು ಹನಿಟ್ರ್ಯಾಪ್​ ಬಲೆಗೆ ಕೆಡವುತ್ತಿದ್ದಾರೆ.

ಕನಸಿಗೆ ಕೊಳ್ಳಿ

ಬೆಳಗಾವಿಯ ಕ್ಲಬ್ ರಸ್ತೆಯ ಇಂಜಿನಿಯರ್ ಯುವತಿಯ ಕತೆ ಇದು. ಬೆಂಗಳೂರು ಯುವಕನ ಆಕರ್ಷಕ ಪ್ರೊಫೈಲ್ ನೋಡಿ 2016ರ ಏಪ್ರಿಲ್​ನಲ್ಲಿ ವಿವಾಹವಾಗಿದ್ದ ಈಕೆಗೆ ಮೊದಲ ರಾತ್ರಿಯಲ್ಲೇ ಪತಿ ಸನಾಲ್ ಖಾನ್​ನ ಕ್ರೂರತನ ಹಾಗೂ ಆತನ ಅಸಲಿ ಹೆಸರು ತಿಳಿಯಿತು. ಆದರೂ ದೌರ್ಜನ್ಯ ಸಹಿಸಿಕೊಂಡು ದಾಂಪತ್ಯ ಸಾಗಿಸುತ್ತಿದ್ದಳು. ಕಾಲಕ್ರಮೇಣ ಪತಿ ಜತೆಗೆ ಅತ್ತೆ, ಮಾವ ಕೂಡ ದೈಹಿಕ, ಮಾನಸಿಕ ಕಿರುಕುಳ ನೀಡಲಾರಂಭಿಸಿದರು. ತವರು ಮನೆಯವರು ಮತ್ತು ಯಾವುದೇ ಸ್ನೇಹಿತೆಯರೊಂದಿಗೆ ಮಾತನಾಡಬಾರದೆಂದು ನಿರ್ಬಂಧ ವಿಧಿಸಿ, ಹಣಕ್ಕಾಗಿ ಪೀಡಿಸಿ ಮನೆಯಿಂದ ಹೊರದಬ್ಬಿದರು. ವರ್ಷವಿಡೀ ನಿರ್ಲಕ್ಷಿಸಿದ ಪತಿಯಿಂದ ವಿಚ್ಛೇದನ ಬಯಸಿ ಹಿರಿಯರ ಸಮೇತ ಗಂಡನ ಮನೆಗೆ ತೆರಳಿದ ಆಕೆಗೆ ವಿಚ್ಛೇದನ ಬೇಕಾದಲ್ಲಿ 50 ಲಕ್ಷ ರೂಪಾಯಿ ಜತೆಗೆ 1 ಕೆಜಿ ಚಿನ್ನ ಕೊಡಬೇಕು. ಇಲ್ಲವಾದಲ್ಲಿ ಜೀವನವನ್ನೇ ಹಾಳುಮಾಡುವ ಬೆದರಿಕೆ ಒಡ್ಡಿದರು. ಆಕೆ ಈಗ ನ್ಯಾಯಕ್ಕಾಗಿ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನಂತೆಯೇ ಬೇರಾರೂ ಈ ರೀತಿ ಪ್ರೊಫೈಲ್ ನಂಬಿ ಮೋಸಹೋಗಬೇಡಿ ಎಂದು ನೊಂದ ಮಹಿಳೆ ಕಣ್ಣೀರಿಡುತ್ತಾಳೆ.

ಮಾನಸಿಕವಾಗಿ ದುರ್ಬಲವಾಗಿರುವ ಯುವಕ-ಯುವತಿಯರು ಐಷಾರಾಮಿ ಜೀವನದ ಆಮಿಷಕ್ಕೆ ಒಳಗಾಗಿ ಪರಸ್ಪರ ಮೈ-ಮನ ಒಪ್ಪಿಸಿಕೊಳ್ಳುವುದು ಆತಂಕದ ವಿಚಾರ. ಕೆಲ ಪಾಲಕರೇ ತಮ್ಮ ಮಕ್ಕಳನ್ನು ಇನ್ನೊಬ್ಬರ ಜೀವನಶೈಲಿಗೆ ಹೋಲಿಕೆ ಮಾಡುವುದೂ ಇಂತಹ ಘಟನೆಗೆ ಕಾರಣವಾಗುತ್ತಿದೆ. ಪಾಲಕರು ಇಂಥ ವರ್ತನೆ ಬಿಡಬೇಕು. | ಡಾ. ಸೋನಾಲಿ ಸನೋಬತ್ ಮನೋವಿಜ್ಞಾನ ತಜ್ಞೆ