ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಕುಮಾರಸ್ವಾಮಿ ಲೇಔಟ್‌ನಲ್ಲಿ ನಲ್ಲಿಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿಕೊಂಡು ಮನೆಯೊಳಗೆ ನುಗ್ಗಿದ ಸರಗಳ್ಳ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ.
ಕೆಎಸ್ ಲೇಔಟ್‌ನ 18ನೇ ಅಡ್ಡರಸ್ತೆ ನಿವಾಸಿ ಸರೋಜಿನಿ ರಾಯನ್ (86) ಸರ ಕಳೆದುಕೊಂಡವರು. ಸರೋಜಿನಿ ಭಾನುವಾರ ಬೆಳಗ್ಗೆ 6 ಗಂಟೆಗೆ ಮನೆಯ ಮುಂದಿನ ನಲ್ಲಿಯಿಂದ ಬಿಂದಿಗೆಯಲ್ಲಿ ನೀರು ತರಲು ಹೋಗಿದ್ದರು. ಬಿಂದಿಗೆಗೆ ನೀರು ತುಂಬಿಸಿ ಅಡುಗೆ ಮನೆಯೊಳಗೆ ಬರುತ್ತಿದ್ದಂತೆ ಮಂಕಿ ಕ್ಯಾಪ್ ಧರಿಸಿ ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳ ಸರೋಜಿನಿ ಅವರ ಕತ್ತಿನಲ್ಲಿದ್ದ 24 ಗ್ರಾಂ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಸರೋಜಿನಿ ಜೋರಾಗಿ ಕೂಗಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿಷಯ ತಿಳಿದು ಕುಮಾರಸ್ವಾಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯ ನಡೆದ ಮನೆಯ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಲಾಗಿದೆ. ಅದರಲ್ಲಿ ಕಳ್ಳನ ಮುಖಚಹರೆ ಅಸ್ಪಷ್ಟವಾಗಿ ಸೆರೆಯಾಗಿದ್ದು, ಸದ್ಯದಲ್ಲೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಸರೋಜಿನಿ ಈ ಹಿಂದೆ ಪ್ರೌಢಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿದ್ದು, ಸದ್ಯ ನಿವೃತ್ತಿ ಹೊಂದಿದ್ದಾರೆ. ಇವರು ಪ್ರತಿನಿತ್ಯ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುವುದನ್ನು ಗಮನಿಸಿ ಸಂಚು ರೂಪಿಸಿ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.