ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) 2025- 26ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಗಿದ್ದು, ಸುಮಾರು 1.58 ಕೋಟಿ ರೂ. ಉಳಿತಾಯ ತೋರಿಸಲಾಗಿದೆ. ಇದೇ ಮೊದಲ ಬಾರಿ ಅವಳಿನಗರದ ಜನರಿಗೆ ಗುಂಪು ವಸತಿ ಯೋಜನೆ ಮೂಲಕ ಸೂರು ಕಲ್ಪಿಸಲು ಬಜೆಟ್ ಗ್ಯಾರಂಟಿ ನೀಡಲಾಗಿದೆ.
ಇತ್ತೀಚೆಗೆ ಹುಡಾ ಕಚೇರಿಯಲ್ಲಿ ಅಧ್ಯಕ್ಷ ಶಾಕೀರ್ ಸನದಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಬಜೆಟ್ ಮಂಡನೆ ಮಾಡಿ ಅನುಮೋದನೆ ಕೋರಲಾಯಿತು.
2024-25ನೇ ಸಾಲಿನಲ್ಲಿ ಹುಡಾದ ಪ್ರಾರಂಭಿಕ ಶಿಲ್ಕು 117.9 ಕೊಟಿ ರೂ. ಇದ್ದು, 2025-26ನೇ ಸಾಲಿನಲ್ಲಿ ಒಟ್ಟು ಅಂದಾಜು 77.40 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಒಟ್ಟಾರೆ ಅಂದಾಜು 194.50 ಕೋಟಿ ರೂ. ಆದಾಯ ಮೂಲ ಗುರುತಿಸಲಾಗಿದೆ.
ಈ ನಿರೀಕ್ಷಿತ ಆದಾಯ ಮೂಲಗಳಲ್ಲಿ ಬೆಟರ್ಮೆಂಟ್ ಲೆವಿ 5 ಕೋಟಿ ರೂ., ಮೇಲ್ವಿಚಾರಣಾ ಶುಲ್ಕದಿಂದ 5 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ನಿವೇಶನಗಳ ಹಂಚಿಕೆಯಿಂದ 10 ಕೋಟಿ ಹಾಗೂ ಮೂಲೆ/ ಬಿಡಿ ನಿವೇಶನಗಳ ಇ ಹರಾಜಿನಿಂದ 13.50 ಕೋಟಿ ರೂ. ಆದಾಯ ಬರಬಹುದಾಗಿದೆ. ನಾಗರೀಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತದಿಂದ 15.20 ಕೋಟಿ ರೂ. ಆದಾಯದ ನಿರೀಕ್ಷೆ ಇದೆ.
ವೆಚ್ಚಗಳು:
2025-26ನೇ ಸಾಲಿನಲ್ಲಿ ಹುಡಾದಿಂದ 192.92 ಕೋಟಿ ರೂ. ಖರ್ಚಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಪ್ರಾಧಿಕಾರದಿಂದ ಹೊಸ ವಿನ್ಯಾಸಗಳ ಅಭಿವೃದ್ಧಿಗೆ 40 ಕೋಟಿ ರೂ., ಪ್ರಾಧಿಕಾರ ವ್ಯಾಪ್ತಿಯ ವಿವಿಧ ಕೆರೆಗಳ ಅಭಿವೃದ್ಧಿಗಾಗಿ 31.43 ಕೋಟಿ ರೂ., ಉದ್ಯಾನಗಳ ಅಭಿವೃದ್ಧಿಗೆ ಹಾಗೂ ಮುಂದುವರಿದ ಕಾಮಗಾರಿಗೆ 4.80 ಕೋಟಿ ರೂ., ಅವಳಿನಗರದಲ್ಲಿ ಕೈಗೊಳ್ಳಬಹುದಾದ ಹೊಸ ವಿನ್ಯಾಸಗಳ ಅಭಿವೃದ್ಧಿ ಕಾಮಗಾರಿಗೆ 20 ಕೋಟಿ ರೂ. ಇಡಲಾಗಿದೆ.
ವಸತಿ ಸಮುಚ್ಛಯ:
ವಿಶೇಷ ಎಂದರೆ ಈ ಬಾರಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾದ ಬಡಾವಣೆಗಳಲ್ಲಿ ಸಾಮೂಹಿಕ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗೆ 30 ಕೋಟಿ ರೂ. ಮೀಸಲಿಡಲಾಗಿದೆ.
ಹೊಸ ಲೇಔಟ್ ನಿರ್ಮಾಣಕ್ಕೆ ರೈತರಿಂದ ಜಮೀನು ಸಿಗದಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಗುಂಪು ವಸತಿಗೆ ಮಣೆ ಹಾಕುತ್ತಿದೆ. ಇದಕ್ಕಾಗಿ ಬಜೆಟ್ ನಲ್ಲಿ ಹಣ ಮೀಸಲಿಡುವ ಮೂಲಕ ಇದೇ ಮೊದಲ ಬಾರಿ ವಸತಿ ಸಮುಚ್ಛಯ ನಿರ್ಮಾಣದ ಯೋಜನೆಗೆ ಮೂರ್ತ ರೂಪ ನೀಡಲು ಮುಂದಾಗಿದೆ.
ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಡದ ಎರಡು ಕಡೆಗಳಲ್ಲಿ ಜಿಪ್ಲಸ್ 3 ಮಾದರಿಯ ಅಪಾರ್ಟ್ಮೆಂಟ್ ಗಳು ತಲೆ ಎತ್ತಲಿವೆ ಎಂದು ಹೇಳಬಹುದು.
ಈಗಾಗಲೇ ಹಿಂದಿನ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿರುವ ಅಧ್ಯಕ್ಷ ಶಾಕೀರ್ ಸನದಿ ಅವರು, ಬಜೆಟ್ ನಲ್ಲಿ ಪ್ರಸ್ತಾಪಿಸುವ ಮೂಲಕ ಯೋಜನೆಯ ಗ್ಯಾರಂಟಿ ನೀಡಿದ್ದಾರೆ. ಮಧ್ಯಮ ವರ್ಗದವರ ಸೂರಿನ ಕನಸು ನನಸು ಮಾಡಲು ಈ ಹೊಸ ಯೋಜನೆಗೆ ಕೈ ಹಾಕಿದ್ದಾರೆ.
ವಾಣಿಜ್ಯ ಸಂಕೀರ್ಣ:
ಇದಲ್ಲದೇ ಪ್ರಾಧಿಕಾರ ಒಡೆತನದ ವಿವಿಧ ವಾಣಿಜ್ಯ ನಿವೇಶನಗಳು ಹಾಗೂ ನಾಗರೀಕ ಸೌಲಭ್ಯ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಇಡಲಾಗಿದೆ. ಉಣಕಲ್ಲ ಗ್ರಾಮದ ಸರ್ವೇ ನಂಬರ್ 79/1, 79/2 ರಲ್ಲಿಯ ನಾಗರೀಕ ಸೌಲಭ್ಯ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 4 ಕೋಟಿ ರೂ., ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ 1 ಕೋಟಿ ರೂ. ಹೀಗೆ ಹಲವು ಕೆಲಸಗಳಿಗೆ ಹುಡಾ ಬಜೆಟ್ ನಲ್ಲಿ ಹಣ ಮೀಸಲು ಇಡಲಾಗಿದೆ.
ಒಟ್ಟಾರೆ, ಹುಡಾ ಯೋಜನೆಗಳಿಗೆ ಸರ್ಕಾರದ ಬಳಿ ಅನುದಾನ ಕೇಳದೇ ತನ್ನ ಸ್ವಂತ ಆರ್ಥಿಕ ಶಕ್ತಿಯ ಮೇಲೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ.