ಜಿಲ್ಲೆ

ಮುಂದೆ ಪಾಲಿಕೆಯೇ ಗಣೇಶೋತ್ಸವ ಆಚರಿಸಲಿ

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮುಂದಿನ ವರ್ಷದಿಂದ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಗಣೇಶೋತ್ಸವ ಆಚರಿಸುವಂತಾಗಬೇಕು ಎಂದು ಹಿಂದೂಸ್ತಾನ ಜನತಾ ಪಾರ್ಟಿಯ ಎಸ್​ಸಿ ಘಟಕದ ಉಪಾಧ್ಯಕ್ಷ ರಾಘವೇಂದ್ರ ಕಠಾರೆ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದೆ. ಬಿಜೆಪಿಯದ್ದು ರಾಜಕೀಯ ಹಿಂದುತ್ವ. ನಿಜವಾದ ಹಿಂದುತ್ವವಲ್ಲ. ಕಾಂಗ್ರೆಸ್ ಹಿಂದುಗಳ ವಿರೋಧಿಯಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದು ಯುವಕರ ಹತ್ಯೆಯಾದರೂ ಅವರು ಏನೂ ಮಾಡಲಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಬಿಜೆಪಿಯ ಶಾಸಕರು ಭಾಗವಹಿಸಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಅವರನ್ನು ಹಿಂದು ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇದಾಗಿದೆ. ಮುಂದೆ ಪ್ರತಿ ವರ್ಷ ಇದೇ ರಾಜಕೀಯ ನಡೆಯುವುದು ಖಚಿತವಿದ್ದು, ಪಾಲಿಕೆಯಿಂದಲೇ ಗಣೇಶ ಹಬ್ಬ ಆಚರಿಸುವುದು ಸೂಕ್ತ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ಮೆಹರವಾಡೆ, ಸಂದೀಪ ಇದ್ದರು.