ಜಿಲ್ಲೆ

ಬಿಡಾಡಿ ದನ ಬಿಟ್ಟರೆ ಗೋಶಾಲೆಗೆ ಅಟ್ಟುವ ಎಚ್ಚರಿಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಸಾರ್ವಜನಿಕ ಸ್ಥಳಗಳಲ್ಲಿ ಬಿಡುವ ಬಿಡಾಡಿ ದನಗಳನ್ನು ಗೋಶಾಲೆಗೆ ಬಿಡಲಾಗುವುದು ಹಾಗೂ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆಗಳು, ವೃತ್ತಗಳು, ಆಟದ ಮೈದಾನ, ಮಾರುಕಟ್ಟೆ, ಉದ್ಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳಾದ ದನ, ಎಮ್ಮೆ, ಕರು, ಹೆಚ್ಚಾಗಿ ಬಿಡಲಾಗುತ್ತಿದೆ. ಜಾನುವಾರು ಹಾಗೂ ಹಂದಿಗಳಿಂದ ಪಾದಚಾರಿಗಳು, ಮಕ್ಕಳು, ವೃದ್ಧರು, ವಾಹನ ಚಾಲಕರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಮುಖ್ಯ ಪಶುವೈದ್ಯಾಧಿಕಾರಿ (ಪ್ರಭಾರಿ) ಡಾ. ಎ.ಜಿ. ಕುಲಕರ್ಣಿ ತಿಳಿಸಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆಯ ಸಹಾಯವಾಣಿಗೆ ಸಾಕಷ್ಟು ದೂರುಗಳು ಸಹ ಸ್ವೀಕೃತವಾಗಿವೆ. ಬಿಡಾಡಿ ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳನ್ನು 24 ತಾಸಿನೊಳಗೆ ತಮ್ಮ ಸುಪರ್ದಿಗೆ ತೆಗೆದುಕೊಂಡು ಸಾಕಬೇಕು ಎಂದು ಸೂಚಿಸಿದ್ದಾರೆ.

ಹಂದಿಗಳ ಸಾಕಾಣಿಕೆದಾರರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳನ್ನು ಬಿಡಬಾರದೆಂದು ಈ ಹಿಂದಿನ ಸಭೆಯಲ್ಲಿ ಮತ್ತು ದೂರವಾಣಿ ಮೂಲಕ ತಿಳಿಸಲಾಗಿದೆ. ಹಂದಿಗಳ ಸಾಕಾಣಿಕೆ ಮಾಲೀಕರು ಹಂದಿಗಳನ್ನು ಹಿಡಿದು ಶೀಘ್ರದಲ್ಲಿಯೇ ಸ್ಥಳಾಂತರಗೊಳಿಸಬೇಕು. ತಪ್ಪಿದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸುವ ಜಾನುವಾರುಗಳನ್ನು ಬಿಡಾಡಿ ಪ್ರಾಣಿಗಳೆಂದು ಪರಿಗಣಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಕೆಯಿಂದ ಹಿಡಿದು ವಿವಿಧ ಗೋಶಾಲೆಗೆ ಬಿಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ 2 ದಿನಗಳಲ್ಲಿ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಡಾ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.