ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಈ ವರ್ಷ 3 ದಿನಗಳ ಕಾಲ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಕ್ಕೆ ಹು ಧಾ ಮಹಾನಗರ ಪಾಲಿಕೆ ಅನುಮತಿ ನೀಡಿದೆ.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಸಂಜೀವ ಬಡಸ್ಕರ್ ಅವರಿಗೆ ಶರತ್ತುಬದ್ಧ ಅನುಮತಿ ಪತ್ರ ನೀಡಿದರು. ಸೆ. 7, 8 ಹಾಗು 9ರಂದು ಗಣೇಶೋತ್ಸವ ಆಚರಣೆ ನಡೆಯಲಿದೆ. ಈದ್ಗಾ ಮೈದಾನದಲ್ಲಿ ಇದು ಸತತ 3 ನೇ ವರ್ಷ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು.
ಹಿಂದಿನ ವರ್ಷಗಳಂತೆ ಶರತ್ತುಗಳನ್ನು ವಿಧಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಸೆ. 7ರಂದು ಬೆಳಗ್ಗೆ 6ರಿಂದ 8 ಗಂಟೆಯ ನಡುವೆ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. 9ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಗಣೇಶ ವಿಸರ್ಜನಾ ಮೆರವಣಿಗೆಯನ್ನು ಆರಂಭಿಸಬೇಕೆಂದು ಶರತ್ತು ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಮೈದಾನದಲ್ಲಿ ಉತ್ಸವ ಮೂರ್ತಿಯ ಹೊರತಾಗಿ ಯಾವುದೇ ರೀತಿಯ ಬಾವುಟಗಳು, ವಿವಾದಿತ ಹಾಗೂ ಪ್ರಚೋದನಕಾರಿ ಫೋಟೋಗಳು, ಭಿತ್ತಿ ಪತ್ರ, ಬ್ಯಾನರ್, ಬಂಟಿಂಗ್ಸ್ಗಳನ್ನು ಹಾಕಬಾರದು. ಯಾವುದೇ ಪ್ರಚೋದನಕಾರಿ ಹಾಡುಗಳನ್ನು ಹಾಕತಕ್ಕದಲ್ಲ. ಡಿಜೆ ಅಥವಾ ಕರ್ಕಶಯುಕ್ತ ಧ್ವನಿವರ್ಧಕಗಳನ್ನು ಉಪಯೋಗಿಸುವಂತಿಲ್ಲ. ವಾಣಿಜ್ಯ ಹಾಗೂ ಇನ್ನಿತರ ಉದ್ದೇಶದ ಜಾಹೀರಾತು ಪ್ರದರ್ಶಿಸಲು ಅವಕಾಶವಿಲ್ಲ. ಈದ್ಗಾ ಮೈದಾನದ ಆವರಣದಲ್ಲಿ ಪಟಾಕಿ ಮತ್ತು ಸುಡುಮದ್ದುಗಳನ್ನು ಬಳಸತಕ್ಕದಲ್ಲ ಎಂದು ಹೇಳಿದರು.
ಪಾಲಿಕೆ ವತಿಯಿಂದಲೇ ಮೈದಾನದ ಸ್ವಚ್ಛತೆ, ಲೈಟಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದು. ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಮೈದಾನದ ಸುತ್ತಮುತ್ತ ಹಾಗೂ ಮೆರವಣಿಗೆ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ ಹಾಗೂ ದ್ರೋಣ್ ಕಣ್ಗಾವಲು ವ್ಯವಸ್ಥೆ ಪಾಲಿಕೆಯಿಂದಲೇ ಮಾಡಲಾಗುವುದು. ಸೆ. 6ರಂದು ಹಾಲುಗಂಬ ಪೂಜೆ ನೆರವೇರಿಸಲು ಮಹಾಮಂಡಳಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಹಿಂದಿನ ವರ್ಷಗಳಂತೆ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುವುದು. ಪಾಲಿಕೆಯು ತಿಳಿಸಿರುವಂತೆ ಸೆ. 7ರಂದು ನಿಗದಿತ ಸಮಯದಲ್ಲೇ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿಷ್ಠಾಪನೆ ಪೂರ್ವ ಮೂರ್ತಿಯ ಮೆರವಣಿಗೆ ಹಾಗೂ ವಿಸರ್ಜನಾ ಮೆರವಣಿಗೆಯ ಮಾರ್ಗ ಹಾಗೂ ಆಚರಣೆಯ ಬಗ್ಗೆ ಒಂದೆರಡು ದಿನಗಳಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ್ ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ ಪ್ರಸಾದ, ಉದ್ಯಮಿ ಎಂ.ವಿ. ಕರಮರಿ, ರಘು ಯಲ್ಲಕ್ಕನವರ, ವಿವೇಕ ಮೋಖಾಶಿ, ಇತರರು ಇದ್ದರು.