ಜಿಲ್ಲೆ

ನಿಖಿಲ್-ರೇವತಿ ಕಲ್ಯಾಣ ಏಪ್ರಿಲ್​ನಲ್ಲಿ: ಪುತ್ರನ ವಿವಾಹಕ್ಕೆ ಜಾಗ ಪರಿಶೀಲಿಸಿದ ಎಚ್​ಡಿಕೆ

Mysuru Rural

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ನಿಖಿಲ್ ಮದುವೆಗಾಗಿ ಜಾನಪದ ಲೋಕದ ಬಳಿ ಗುರುತಿಸಿರುವ ಜಾಗವನ್ನು ಎರಡನೇ ಬಾರಿ ವೀಕ್ಷಣೆ ಮಾಡಿ ಪರಿಶೀಲಿಸಿದರು.

ನಿಖಿಲ್-ರೇವತಿ ವಿವಾಹ ಏ17ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೀಗರಾದ ಮಂಜುನಾಥ್ ಜತೆ ಆಗಮಿಸಿ, 54 ಎಕರೆ ಜಾಗ ವೀಕ್ಷಿಸಿದರು. ಈ ಸ್ಥಳ ರಾಮನಗರದಿಂದ 5 ಕಿ.ಮೀ, ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಸಮಾರಂಭಕ್ಕೆ ಸೂಕ್ತ ಸ್ಥಳ ಎಂದು ಕುಮಾರಸ್ವಾಮಿ ಹೇಳಿದರು.

ನಾವೆಲ್ಲ ಸಂಪ್ರದಾಯಸ್ಥ ಕುಟುಂಬದವರಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಜಾಗಕ್ಕೆ ಜ್ಯೋತಿಷಿಗಳು ಭೇಟಿ ನೀಡಿ, ಕಲ್ಯಾಣ ಮಂಟಪ ಎಲ್ಲಿರಬೇಕು, ಧಾರ್ವಿುಕ ಕಾರ್ಯ ಎಲ್ಲಿ ನಡೆಸಬೇಕು ಎಂಬುದನ್ನು ಗುರುತಿಸಲಿದ್ದಾರೆ ಎಂದು ತಿಳಿಸಿದರು.

ಇದು ಅದ್ದೂರಿ ಮದುವೆ ಅಲ್ಲ. ಗಣ್ಯರು ಆಗಮಿಸುವುದರಿಂದ ವಿಶಾಲ ಪ್ರದೇಶ ಆಯ್ಕೆ ಮಾಡಿಕೊಂಡಿದ್ದೇವೆ. ಪಾರ್ಕಿಂಗ್​ಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸುತ್ತಲಿನ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. ನನ್ನೆಲ್ಲ ಜನರಿಗೆ ಆಮಂತ್ರಣ ನೀಡಲಾಗುವುದು. ಆಹ್ವಾನ ಪತ್ರಿಕೆ ಸಹ ಸರಳವಾಗಿರಲಿದೆ. ಭೋಜನ ಹಾಗೂ ವಾಹನಗಳ ನಿಲುಗಡೆಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.

ಜಾನಪದ ಲೋಕದ ಬಳಿಯ ಸ್ಥಳವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬೀಗರಾದ ಮಂಜುನಾಥ್ ವೀಕ್ಷಣೆ ಮಾಡಿದರು.