ಜಿಲ್ಲೆ

ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ: ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ

ಕೆ.ಎನ್.ರಾಘವೇಂದ್ರ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಇದೆ. ಅಂತೆಯೇ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಬೇಕು ಎಂಬ ಜನರ ನಿರೀಕ್ಷೆ ಇದೆ ಎಂದು ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವನಾಗುತ್ತೇನೆ ಎಂದು ನನಗೆ ಶಕ್ತಿ ತುಂಬಿದ್ದಾರೆ. ಸಿಎಂ ಆಗಿ ಕೆಲಸ ಮಾಡಿದ್ದೇನೆ. ಅದರಂತೆ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂಬ ನಿರೀಕ್ಷೆ ಇದೆ. ಕಾವೇರಿ ಸಮಸ್ಯೆ ಕೂಡ ಬಗೆಹರಿಸುತ್ತೇನೆ. ಅದಕ್ಕೆ ಯಾವ ರೀತಿ ಪರಿಹಾರ ಎಂಬ ಬಗ್ಗೆ ದೇವೇಗೌಡರು ಸಲಹೆ ಪಡೆಯುತ್ತೇನೆ ಎಂದರು.

ಇದು ನನ್ನ ಗೆಲವು ಎನ್ನುವುದಕ್ಕಿಂತ ಮಂಡ್ಯ ಜಿಲ್ಲೆಯ ಜನರ ಗೆಲವು. ಈ ಚುನಾವಣೆಯ ಜವಾಬ್ದಾರಿಯನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಹಿಸಿದ್ದರು. ಅವರ ಶ್ರಮ ನನ್ನ ಗೆಲುವಿಗೆ ಕಾರಣ. ಇದರ ಫಲ ಜನತೆಗೆ ತಲುಪಬೇಕು. ಜಿಲ್ಲೆಯ ಜನರ ಋಣ ನನ್ನ ಮೇಲಿದೆ. ಅವಕಾಶವನ್ನು ಜನರ ಸಮಸ್ಯೆಗೆ ಪರಿಹಸುತ್ತೇನೆ. ಎಲ್ಲ ಅಂಶಗಳು ಗೆಲುವಿಗೆ ಕಾರಣವಾಗಿದೆ. ಪಕ್ಷ ಬೇಧ ಮರೆತು ನನ್ನ ಪರ ಕೆಲಸ ಮಾಡಿದ್ದಾರೆ. ರಾಜ್ಯದ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದ ಅಭ್ಯರ್ಥಿ ಎಂದು ನಾನು ಇಲ್ಲಿಯೇ ಇರಲಿಲ್ಲ. ಇಲ್ಲಿನ ಜನ ನನ್ನನ್ನ ಪ್ರಚಾರಕ್ಕೆ ಕಳುಹಿಸಿದರು. ರಾಜ್ಯದ ಹಲವು ಕಡೆ ಪ್ರಚಾರ ಮಾಡಿದ್ದೇನೆ. 19 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲು ಕ್ಷೇತ್ರದ ಜನರು ಸಹಕರಿಸಿದರು. ಆದರೂ ಸಂಪೂರ್ಣ ಸಂತೃಪ್ತಿ ಆಗಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ. ಕುಮಾರಸ್ವಾಮಿ ಗೆಲ್ಲಲ್ಲ ಎಂದು ಸಿಎಂ ಹಾಗೂ ಡಿಸಿಎಂ ಹೇಳಿದ್ದರು. ಎಚ್‌ಡಿಕೆ ಸೋಲು ಸೂರ್ಯ ಹುಟ್ಟುವುದಷ್ಟೇ ಖಚಿತ ಎಂದಿದ್ದರು. ಈಗ ಸೂರ್ಯ ಹುಟ್ಟಲೂ ಸರ್ಕಾರ ಆದೇಶ ಕೊಡುತ್ತಾರೆಯೇ ನೋಡೋಣ. ಎಕ್ಸಿಟ್ ಫೋಲ್ ವರದಿ ಕೂಡ ಕೆಲವೂ ಬಾರಿ ಬದಲಾವಣೆ ಆಗುತ್ತದೆ. ಸರ್ಕಾರ ರಚನೆಗೆ ಏನು ತೊಂದರೆ ಇಲ್ಲ. ಡಾ.ಸಿ.ಎನ್.ಮಂಜುನಾಥ್ ಚುನಾವಣೆ ಸ್ಪರ್ಧಿಸಿದಾಗ ಜೆಡಿಎಸ್ ಮುಗಿಸುತ್ತಾರೆಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಹರಕೆ ಕುರಿ ಮಾಡಲು ಹೊರಟಿದ್ದಾರೆ ಎಂದಿದ್ದರು. ಕಳೆದ ಬಾರಿ ಡಿ.ಕೆ.ಸುರೇಶ್ ಗೆಲ್ಲಲು ಜೆಡಿಎಸ್ ಕಾರಣ. ನನ್ನ ಭದ್ರಕೋಟೆಯನ್ನ ನಾಶ ಮಾಡಲು ಹೊರಡಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ ಎಂದು ತಿರುಗೇಟು ನೀಡಿದರು.