ಜಿಲ್ಲೆ

ಮೈಶುಗರ್ ಶಾಲೆ ಉಳಿಸಲು ಪ್ರಯತ್ನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ಮಂಡ್ಯ: ಮೈಶುಗರ್ ಪ್ರೌಢಶಾಲೆ ಯಾರ ಅಪ್ಪಂದು ಎಂದು ಲೀಸ್‌ಗೆ ಕೊಡುತ್ತಿದ್ದಾರೆ. ಪುಣ್ಯಾತ್ಮರು ಕಟ್ಟಿರುವ ಶಾಲೆಯನ್ನು ಗುತ್ತಿಗೆ ನೀಡಲು ಹೊರಟಿದ್ದಾರೆ. ಆ ಶಾಲೆಗೆ ಸೇರಿದ ಆಸ್ತಿಯ ಬೆಲೆ ಎಷ್ಟಿದೆ ಅವರಿಗೆ ಗೊತ್ತಿದ್ದೆಯೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಶಾಲೆಯನ್ನು ಗುತ್ತಿಗೆ ಕೊಡುತ್ತಿದ್ದಾರೆ. ನಾನು ಮೈಶುಗರ್ ಶಾಲೆಗೆ ಒಬ್ಬ ಸದಸ್ಯ ಇದ್ದೇನೆ. ನನ್ನ ಬಳಿ ಯಾರೂ ಬಂದು ಚರ್ಚೆ ಮಾಡಿದ್ದಾರೆ. ನಾನು ಒಬ್ಬ ಟ್ರಸ್ಟಿ ಇದ್ದೇನೆ. ಯಾವ ಕಾನೂನು ಆಧಾರದ ಮೇಲೆ ಲೀಸ್‌ಗೆ ಕೊಡಲು ಹೊರಟಿದ್ದಾರೆ. ಮೈಶುಗರ್ ಶಾಲೆ ಅಭಿವೃದ್ಧಿಗೆ ಎಷ್ಟು ಕೋಟಿ ಬೇಕು ಅದನ್ನು ಕೊಡಲು ತಯಾರಿದ್ದೇನೆ. ವೇತನ ಕೊಡಲು ಹಣ ಇಡಲು ತಯಾರಿದ್ದೇನೆ. ಶಾಲೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಹಿನ್ನೆಲೆ ಪ್ರತಿಕ್ರಿಯಿಸಿದ ಸಚಿವ ಎಚ್‌ಡಿಕೆ, ಹಾಸನಲ್ಲಿ 32ಕ್ಕೂ ಅಧಿಕ ಸಾವು ಆಗಿವೆ. ಇದನ್ನು ತಡೆಗಟ್ಟಲು ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಸನ ಮಾತ್ರ ಅಲ್ಲ ರಾಜ್ಯಾದ್ಯಂತ ಹೃದಯಾಘಾತ ಹೆಚ್ಚಾಗುತ್ತಿವೆ. ಆದ್ದರಿಂದ ಪ್ರತಿ ತಾಲೂಕಿನಲ್ಲಿ ಜೆಡಿಎಸ್‌ನಿಂದ ಹೃದಯ ತಪಾಸಣೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಮಿಮ್ಸ್‌ನಲ್ಲಿ ಹೃದಯ ವಿಭಾಗ ಇಲ್ಲ. ಹೊಸದಾಗಿ ಹೃದಯ ವಿಭಾಗ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು. ಸಚಿವರು ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ದಿಶಾ ಸಭೆಗೆ ಕಾಂಗ್ರೆಸ್ ಶಾಸಕರು ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಭೆಗೆ ಕಾಂಗ್ರೆಸ್ ಶಾಸಕರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಕೆಲಸವನ್ನು ನಾವು ಮಾಡುತ್ತೇನೆ. ನನಗೆ ಯಾವ ಪ್ರತಿಷ್ಠೆ ಇಲ್ಲ. ನನಗೆ ಕಾಂಗ್ರೆಸ್ ಶಾಸಕರ ಆಹ್ವಾನ ಬೇಕಿಲ್ಲ. ಮಂಡ್ಯ ಜನರು ನನಗೆ ಆಹ್ವಾನ ನೀಡಿದ್ದಾರೆ. ನಾನು ಇಲ್ಲಿಗೆ ಬಂದು ಅಭಿವೃದ್ಧಿ ಮಾಡುತ್ತೇನೆ ಎಂದರು.

ಸಿಎಂ ಬದಲಾವಣೆ ಚರ್ಚೆ ವಿಚಾರದ ಪ್ರತಿಕ್ರಿಯಿಸಿ, ನನಗೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಇಲ್ಲ. ಸಿಎಂ ಮುಂದುವರಿಯುತ್ತಾರೋ, ಬೇರೆ ಅವರು ಆಗುತ್ತಾರೋ ನನಗೆ ಸಂಬಂಧ ಇಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅವರೇ ತೀರ್ಮಾನ ಮಾಡಬೇಕು. ನಾನು ಏಕೆ ತಲೆ ಕೆಡಿಸಿಕೊಳ್ಳಲಿ, ಅದರ ಅವಶ್ಯಕತೆ ನನಗೆ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ನಿಖಿಲ್ ಓಡಾಡುತ್ತಿದ್ದಾರೆ. ಮೈತ್ರಿಗೂ ಇದಕ್ಕೂ ಸಂಬಂಧ ಇಲ್ಲ. 224 ಸ್ಥಾನಗಳಿಗೆ ಜೆಡಿಎಸ್ ನಿಲ್ಲಲು ಆಗಲ್ಲ. ನಮಗೆ ಶಕ್ತಿ ಇರುವ ಕಡೆ ಸಂಘಟನೆ ಮಾಡುತ್ತಾ ಇದ್ದೇವೆ. ಚುನಾವಣೆ ಬಂದಾಗ ಕೇಂದ್ರ ನಾಯಕರ ಜತೆ ಕ್ಷೇತ್ರಗಳ ಬಗ್ಗೆ ಮಾತಾಡುತ್ತೇವೆ ಎಂದು ವಿವರಿಸಿದರು.

ಮೇಕೆದಾಟು ಯೋಜನೆ ಅನುಮತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮೊದಲು ತಮಿಳುನಾಡಿನವರನ್ನು ಒಪ್ಪಿಸಲಿ. ತಮಿಳುನಾಡಿನವರು ಹಾಗೂ ಕಾಂಗ್ರೆಸ್ಸಿಗರು ಪಾಟ್ನರ್‌ಗಳು. ಅವರ ಒಪ್ಪಿಗೆ ತಗೊಂಡು ಬನ್ನಿ, ಮೇಕೆದಾಟು ಮಾಡಿಸೋಣಾ. ಮೇಕೆದಾಟು ಯೋಜನೆ ಅನುಷ್ಠಾನವಾದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದರು.