ಜಿಲ್ಲೆ

ಸಿದ್ದು, ಹೆಚ್ ಡಿಕೆಗೆ ಮಹತ್ತರವಾದ ಸಲಹೆ ಕೊಟ್ಟ ಆರೋಗ್ಯ ಸಚಿವ

ಚಿಕ್ಕಬಳ್ಳಾಪುರ: ಮುಂಬರುವ ದಿನಗಳಲ್ಲಾದರೂ ಇಬ್ಬರು ಅಧಿಕಾರಕ್ಕಾಗಿ ಸ್ವಾರ್ಥ ಮೈತ್ರಿ ನಿಲುವನ್ನು ಬಿಡಬೇಕು. ಪರಸ್ಪರ ಬೇರೆ ಬೇರೆಯಾಗಿ, ಅವರವರ ಸ್ವಂತ ಧೋರಣೆಯಲ್ಲಿ ಕೆಲಸ ಮಾಡಬೇಕು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ.

ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಅನೈತಿಕ, ಜನ ವಿರೋಧಿ ಮೈತ್ರಿ ಎಂಬುದಾಗಿ ಹಲವು ಬಾರಿ ನಾನೇ ಟೀಕಿಸಿದ್ದೆ. ಇದನ್ನು ಈಗಲಾದರೂ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿರುವುದು ಸಂತೋಷದ ವಿಚಾರ ಎಂದು ಚಿಕ್ಕಬಳ್ಳಾಪುರದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಎಷ್ಟು ಸಲ ಮದುವೆಯಾಗೋದು, ಎಷ್ಟು ಸಲ ಡೈವೋರ್ಸ್ ಕೊಡುವುದು. ಮೈತ್ರಿಗೆ ಒಂದು ಅರ್ಥವಿಲ್ಲವೇ?. ಅಧಿಕಾರ ಬೇಕಾದಗೆಲ್ಲ ಸೇರುವುದು, ಅಧಿಕಾರ ಹೋದ ಬಳಿಕ ಟೀಕಿಸುವುದು ಸರೀನಾ? ಎಂದು ಪ್ರಶ್ನಿಸಿದ ಸಚಿವರು, ಜೆಡಿಎಸ್ ಕಾಂಗ್ರೆಸ್ ನಿಂದ ದೂರ ಉಳಿಯಬೇಕು. ಆಗ ಮಾತ್ರ ಇರುವ ಗೌರವವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಿರೀಕ್ಷೆಯಂತೆ ಮೊದಲ ಬಾರಿಗೆ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಖುಷಿಯ ವಿಚಾರ. ಶೇ.10 ರಷ್ಟಿದ್ದ ಮತ ಪ್ರಮಾಣ ಶೇ.30 ಕ್ಕಿಂತಲೂ ಏರಿಕೆಯಾಗಿದೆ. ಇದು ಟಿಆರ್ ಎಸ್ ದುರಾಡಳಿತ, ಕುಟುಂಬ ರಾಜಕಾರಣ ವಿರುದ್ಧದ ಜನಾಭಿಪ್ರಾಯವಾಗಿದೆ. ಹಾಗೆಯೇ ಮುಂದಿನ ಚುನಾವಣೆಯಲ್ಲೂ ಅಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಸಚಿವ ಸಂಪುಟ ವಿಸ್ತರಣೆಯು ಸಕಾಲದಲ್ಲಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.