ಜಿಲ್ಲೆ

ಮಾಜಿ ಸಿಎಂ ಎಚ್‌ಡಿಕೆ ಭೇಟಿ ಮಾಡಿದ ಮಹಾಲಿಂಗೇಗೌಡ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟಿದ್ದ ಬಸರಾಳು ಭಾಗದ ಮುಖಂಡ...!

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿ ಫಾರ್ಮ್ ಸಿಗದ ಕಾರಣಕ್ಕೆ ಜೆಡಿಎಸ್ ತೊರೆದಿದ್ದ ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ ಮಂಗಳವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಸ್ಪರ್ಧೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪಕ್ಷದಿಂದ ಹೊರಬಂದು ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಪರ ಚುನಾವಣೆ ಮಾಡಿದ್ದರು. ಇದಾದ ಬಳಿಕ ರಾಜಕೀಯವಾಗಿ ತಟಸ್ಥವಾಗಿದ್ದರು. ಈ ನಡುವೆ ಎಚ್‌ಡಿಕೆ ಅವರ ಕರೆಯ ಮೇರೆಗೆ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಅಂತೆಯೇ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿ ಶೀಘ್ರಗುಣಮುಖರಾಗಲೆಂದು ಹಾರೈಸಿದರು. ಬಳಿಕ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಸುರೇಶ್‌ಗೌಡ, ಸಾ.ರಾ.ಮಹೇಶ್ ಹಾಜರಿದ್ದರು.

ಇನ್ನು ರಾಜಕಾರಣದ ಮುಂದಿನ ನಡೆ ಬಗ್ಗೆ ಚರ್ಚಿಸಲು ಮಾ.29 ರಂದು ಮಂಡ್ಯ ತಾಲೂಕು ಬಸರಾಳು ಗ್ರಾಮದ ಹೇಮಾವತಿ ಬಡಾವಣೆಯಲ್ಲಿ ತಾರಾ ಫಾರ್ಮ್ ಹೌಸ್‌ನಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳ ಸಭೆಯನ್ನು ಮಹಾಲಿಂಗೇಗೌಡ ಕರೆದಿದ್ದಾರೆ.