ರಾಯಚೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಸ್ತತ್ವದ ಪ್ರಶ್ನೆ ಕಾಡುತ್ತಿದ್ದು, ಪಕ್ಷದ ಕಾರ್ಯಕರ್ತರಿಗೆ ಧೈರ್ಯ ಹೇಳಲು ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದು, ಪ್ರತಿಯೊಂದು ಹೇಳಿಕೆಯಲ್ಲಿಯೂ ಹಿಟ್ ಅಂಡ್ ರನ್ ಧೋರಣೆ ಕಾಣುತ್ತಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್‌ನ ಬಹಳಷ್ಟು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸಲು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಿ ಪತನಗೊಳ್ಳಲಿದೆ ಎನ್ನುವ ಹೇಳಿಕೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಎಚ್‌ಡಿಕೆಗೆ ಉಳಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್ ಬೆಂಬಲ ನೀಡಿತ್ತು. ಶಕ್ತಿ ಇದ್ದರೇ ಸರ್ಕಾರವನ್ನು ಉಳಿಸಿಕೊಳ್ಳಬಹುದಾಗಿತ್ತು. ಸರ್ಕಾರ ಐದು ವರ್ಷ ತನ್ನ ಅಕಾರವಯನ್ನು ಪೂರ್ಣಗೊಳಿಸಲಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ ನಡುವೆ ಯಾವುದೇ ಅಸಮಾಧಾನವಿಲ್ಲ. ಅವರು ನಮ್ಮೆಲ್ಲರ ಹಿರಿಯ ನಾಯಕರು, ಆಗಾರ ಸಲಹೆ, ಸೂಚನೆ ನೀಡುತ್ತಿರುತ್ತಾರೆ. ಅವರ ಮಗ ಮಲ್ಲಿಕಾರ್ಜುನ ಸಚಿವರಾಗಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಪಕ್ಷದ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಶಿವಶಂಕರಪ್ಪರಿಗೆ ಯಾರೋ ಅಕಾರಿಗಳು ಹೇಳಿದ್ದರಿಂದ ಸಹಜವಾಗಿ ಮಾತನಾಡಿದ್ದಾರೆ. ಅದನ್ನು ದೊಡ್ಡದು ಮಾಡಲಾಗಿದೆ. ಅವರು ಪಕ್ಷ ನಿಷ್ಠೆಗೆ ಮಾದರಿಯಾಗಿದ್ದಾರೆ.
ಬಿಜೆಪಿ, ಜೆಡಿಎಸ್‌ನಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್‌ಗೆ ಬರಲಿದ್ದಾರೆ. ಮಾಜಿ ಶಾಸಕ ರೇಣುಕಾಚಾರ್ಯ ಬೇರೆ ಕೆಲಸಕ್ಕಾಗಿ ನನ್ನ ಹತ್ತಿರ ಬಂದಿದ್ದರು. ಪಕ್ಷ ಸೇರುವ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಿಂದಪ್ಪ, ತಿಮ್ಮಪ್ಪ ನಾಯಕ, ಮುಖಂಡರಾದ ಮಹ್ಮದ್ ಶಾಲಂ, ನರಸಪ್ಪ ಮಾಡಿಗಿರಿ ಉಪಸ್ಥಿತರಿದ್ದರು.