ಹಾರೋಹಳ್ಳಿ : ಹಾರೋಹಳ್ಳಿ ಮತ್ತು ಮರಳುವಾಡಿ ಗ್ರಾಮಗಳನ್ನು ಹಿಂದುಳಿಯುವಂತೆ ಮಾಡಿದ ಕೀರ್ತಿ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸಲ್ಲುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಆರೋಪಿಸಿದರು.
ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಸೋಮವಾರ ಕಾವೇರಿ ನೀರು ಸರಬರಾಜು ನಿಗಮದಿಂದ ಅಮೃತ ಯೋಜನೆಯಡಿ ಹಮ್ಮಿಕೊಂಡಿದ್ದ 33.80 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಎಲ್ಲ ಅಧಿಕಾರಗಳನ್ನು ಅನುಭವಿಸಿ ಅಭಿವೃದ್ಧಿಯ ಬಗ್ಗೆ ಎಚ್‌ಡಿಕೆ ಕುಟುಂಬ ಗಮನಹರಿಸಲಿಲ್ಲ. ಜನರ ಬಗ್ಗೆ ಚಿಂತಿಸದೇ ಅಭಿವೃದ್ಧಿಯನ್ನೇ ಮರೆತರು ಎಂದು ಟೀಕಿಸಿದರು.
ಅವರ ಅಧಿಕಾರ ಅವಧಿಯಲ್ಲಿ ಬಡವರಿಗೆ ಒಂದೂ ನಿವೇಶನ ಹಂಚಿಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ 50 ಎಕರೆ ಪ್ರದೇಶದಲ್ಲಿ ಬಡವರಿಗೆ ಸುಮಾರು 2000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹೈಟೆಕ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾರೋಹಳ್ಳಿ -ಮರಳವಾಡಿ ರಸ್ತೆ ವಿಸ್ತರಣೆಗೆ 20 ಕೋಟಿ ರೂ., ಬಿಡದಿ ಹಾರೋಹಳ್ಳಿ ರಸ್ತೆ, ಮರಳವಾಡಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಕ್ರಮ, 100 ಹಾಸಿಗೆ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ, ಐಟಿಐ ಕಾಲೇಜು, ಕೃಷಿ ಕಾಲೇಜು, ಕೆರೆಗೆ ನೀರು ತುಂಬಿಸುವುದು ಇನ್ನು ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು, ಮೂಲ ಸೌಲಭ್ಯಗಳನ್ನು ಒದಗಿಸಲು ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಇಲ್ಲಿ ಆಳ್ವಿಕೆ ನಡೆಸಿದವರು ಹಾರೋಹಳ್ಳಿ ಪಟ್ಟಣದ ಜನರಿಗೆ ಕಾವೇರಿ ಕುಡಿಯುವ ನೀರು ಕೊಡಲು ಸಾಧ್ಯವಾಗಲಿಲ್ಲ. ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದಲೂ ಸಾಧ್ಯವಾಗಲಿಲ್ಲ. ಆದರೆ, ಡಿಕೆಶಿ ಸಹೋದರರು ಪಟ್ಟಣಕ್ಕೆ ಕಾವೇರಿ ನೀರು ಒದಗಿಸಿದ್ದಾರೆ. ಹಾರೋಹಳ್ಳಿ ತಾಲೂಕನ್ನು ಘೋಷಣೆ ಮಾಡಿ ಯಾವುದೇ ಅನುದಾನ ಬಿಡುಗಡೆ ಮಾಡಲಿಲ್ಲ. ಯಾವುದೇ ತಾಲೂಕು ಕಚೇರಿ ಕಟ್ಟಡಗಳು ಇಲ್ಲಿಲ್ಲ. ಜನರನ್ನು ಅನಾಥ ಮಾಡಿ ಹೋಗಿದ್ದಾರೆ ಎಂದು ದೂರಿದರು.
ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಕಾಶಿರಾಮ್ ಪವಾರ್ ಮಾತನಾಡಿ, ಮಣಿಯಂಬಾಳ್ ಗ್ರಾಮದಲ್ಲಿ 11.50 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸ್ಟೇಷನ್ ನಿರ್ಮಾಣ ಮಾಡಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅನುಕೂಲವಾಗಿದೆ ಎಂದರು.
ಪೂರ್ಣ ಕುಂಭ ಹಾಗೂ ಹಲವಾರು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಮುಖಂಡರಾದ ಸೌಭಾಗ್ಯಮ್ಮ ಮೋಹನ ಹೊಳ್ಳ, ಸೋಮಶೇಖರ್, ಬಾಲಾಜಿ, ರುದ್ರೇಶ್ ಇತರರು ಇದ್ದರು. ಎಸ್.ರವಿ, ಡಿ.ಎಂ. ವಿಶ್ವನಾಥ್, ಅಶೋಕ್, ಎಚ್.ಎಸ್. ಹರೀಶ್ ಕುಮಾರ್, ಕಾಶಿರಾಮ್ ಪವಾರ್ ಇದ್ದರು.