ಜಿಲ್ಲೆ

ಸಿಎಂ ಸಿದ್ದರಾಮಯ್ಯಗೆ ತಪ್ಪಿನ ಅರಿವಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತನ್ನ ತಪ್ಪಿನ ಅರಿವಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ. ಜತೆಗೆ 67 ಕೋಟಿ ರೂ ಲೂಟಿ ಮಾಡಿದ್ದಾರೆ. ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡುತ್ತಿದ್ದಾರೆ. ಈ ಪರಿಸ್ಥಿತಿ ಸಿದ್ದರಾಮಯ್ಯಗೆ ಬೇಕಿತ್ತಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದ್ವೇಷದ ರಾಜಕಾರಣ ಸಿದ್ದರಾಮಯ್ಯ ಮಾಡ್ತಿದ್ದಾರೆ. ಪೊಲೀಸ್ ಇಲಾಖೆ ಇಟ್ಟು ಏನೇನು ನಡೆಸುತ್ತಿದ್ದಾರೆ ಗೊತ್ತಿದೆ. ಆದರೆ ನಾನು ಸಿದ್ದನಿದ್ದೇನೆ, ಏನು ಬೇಕಾದರೂ ಮಾಡಲಿ. ಜೈಲಿಗೆ ಹೋಗುವಂತದ್ದು ಏನು ಮಾಡಿಲ್ಲ, ನೂರು ಜನ್ಮ ಎತ್ತಿ ಬಂದರೂ ಏನು ಮಾಡಲು ಆಗಲ್ಲ. ಕಾರಲ್ಲಿ ಏಕೆ ದಾಖಲೆ ಇಟ್ಟುಕೊಂಡಿದ್ದೀರಾ?. ದಾಖಲೆಗಳನ್ನು ಜನಗಳ ಮುಂದೆ ಬಿಡುಗಡೆ ಮಾಡಿ. ಗಾಜಿನ ಮನೆಯಲ್ಲಿ ಅವರು ಕುಳಿತಿದ್ದಾರೆ. ನಾನು ಜನರ ನಡುವೆ ಇದ್ದೇನೆ. ಆದ್ದರಿಂದ ನಾನು ಏಕೆ ಭಯ ಬೀಳಲಿ ಎಂದರು.

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ದುಡ್ಡು ಇದ್ದರೆ ಏನು ಬೇಕಾದರೂ ಕೊಂಡುಕೊಳ್ಳಬಹುದು. ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಗೃಹಸಚಿವ ಪರಮೇಶ್ವರ್ ಅವರು ಪ್ರತಿ ದಿನ ಒಂದೊಂದು ಕಥೆ ಹೇಳುತ್ತಾರೆ. ಪಾರದರ್ಶಕವಾದ ಸರ್ಕಾರ ಮಾಡುತ್ತಿದ್ದೇವೆ, ನಮ್ಮದು ಹೈಟೆಕ್ ಸರ್ಕಾರ ಎನ್ನುತ್ತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಡುತ್ತಿರುವುದು ಹೈಟೆಕ್ ಸೌಲಭ್ಯ. ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡುತ್ತಿದ್ದಾರೆ. ಅಧಿಕಾರಿಗಳಿಂದ ನ್ಯಾಯ ದೊರಕಲ್ಲ. ನ್ಯಾಯಾಲಯದಿಂದಲೇ ನ್ಯಾಯ ಸಿಗಬೇಕು. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು. ಆದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಎಂಬ ಶಾಸಕ ರವಿಕುಮಾರ್ ಗಣಿಗ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, ನೂರು ಕೋಟಿ ಸಂಖ್ಯೆ ಗೊತ್ತಿದ್ಯಾ?. ಸರ್ಕಾರ ತೆಗಿಯಲು 5000 ಕೋಟಿ ರೂ ಎಂದರೆ ಯಾರಾದರೂ ನಂಬುತ್ತಾರಾ?. ಕುಮಾರಸ್ವಾಮಿ ಭಜನೆ ಮಾಡದಿದ್ದರೆ ಅವರದು ನಡೆಯಲ್ಲ. ಸರ್ಕಾರ ಬೀಳುತ್ತದೆ ಎಂದು ಅವರೇ ದಿನಾ ಹೇಳುತ್ತಿದ್ದಾರೆ ಎಂದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನು ಚುನಾವಣೆ ಗೆಲ್ಲಲು ಏನು ತೀರ್ಮಾನ ಮಾಡಬೇಕು ಅದನ್ನು ಮಾಡುತ್ತೇನೆ. ಜೆಡಿಎಸ್‌ನಲ್ಲೂ ಸಮರ್ಥ ಕಾರ್ಯಕರ್ತರಿದ್ದಾರೆ. ಅಭ್ಯರ್ಥಿ ವಿಷಯದ ಬಗ್ಗೆ ಇನ್ನು ಯಾವುದೇ ಚರ್ಚೆ ಆಗಿಲ್ಲ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಕಣದಲ್ಲಿರುತ್ತಾರೆ ಎಂದರು.

ಲೋಕಸಭಾ ಸದಸ್ಯನಾದ ಬಳಿಕ ಮೊದಲ ದಿಶಾ ಸಭೆ ನಡೆಸಿದ್ದೇನೆ. ಅಧಿಕಾರಿಗಳು ಹಿಂದಿನ ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ನನ್ನ ಪಾತ್ರ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ಕಾಂಗ್ರೆಸ್ ಶಾಸಕರು, ಸಚಿವರು ಗೈರಾದ ವಿಚಾರ ನನಗೆ ಸಂಬಂಧಿಸಿಲ್ಲ. ಅವರು ಬಂದರೆಷ್ಟು, ಹೋದರೆಷ್ಟು ಅದಕ್ಕೆ ಮಹತ್ವ ನೀಡುವುದಿಲ್ಲ. ಅವರು ಬ್ಯುಸಿ ಇರಬಹುದು, ನನ್ನ ಕೆಲಸ ನಾನು ಮಾಡಿದ್ದೇನೆ. ಕೇಂದ್ರ ಮಂತ್ರಿಯಾಗಿ ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡುತ್ತೇನೆ. ದೊಡ್ಡ ಮಟ್ಟದ ತೀರ್ಮಾನ ಮಾಡುವ ಸಭೆಗಳು ಇದಲ್ಲ. ಕೆಡಿಪಿಗೆ ನಾನು ಬರದಿದ್ದರೂ ಸಭೆಯ ಮಾಹಿತಿ ಪಡೆಯುತ್ತೇನೆ. ನಮ್ಮ ವ್ಯಾಪ್ತಿಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯಕ್ರಮ ಮಾಡಬೇಕು, ಅದನ್ನು ರೂಪಿಸುತ್ತೇವೆ ಎಂದು ಹೇಳಿದರು.