ಮಂಡ್ಯ: ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಗಾಂಧಿ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ವರ್ಷ ಗಾಂಧಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಹೊರಟಿದೆ. ಕೋಟ್ಯಂತರ ರೂ ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಮಾಡುತ್ತಿದೆ. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ನೋಡಲಿಲ್ಲ. ಬದಲಿಗೆ ನಕಲಿ ಗಾಂಧಿಗಳ ಫೋಟೋಗಳಿರುವ ಕಟೌಟ್‌ಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಪ್ರಹಾರ ನಡೆಸಿದರು.
ಈಗ ಇರುವುದು ಅಸಲಿ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅದೇ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಸ್ವತಃ ಮಹಾತ್ಮ ಗಾಂಧೀಜಿ ಅವರು ಆಗಲೇ ಹೇಳಿದ್ದರು. ಅವರ ಕಾಂಗ್ರೆಸ್ ಈಗಿಲ್ಲ. ಈಗ ಇರುವುದು ಆಲಿಬಾಬ ಮತ್ತು 40 ಜನ ಕಳ್ಳರ ಕಾಂಗ್ರೆಸ್. ಗಾಂಧೀಜಿ ಅವರ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟರು ಅವರು. ಗಾಂಧೀಜಿ ಅವರ ರಾಮರಾಜ್ಯದ ಪರಿಕಲ್ಪನೆ ಇವತ್ತು ರಾಜ್ಯದಲ್ಲಿ ಸಾಕಾರ ಆಗಿದೆಯಾ?. ಅವರ ಗ್ರಾಮ ಸ್ವರಾಜ್ಯದ ಕನಸು ಈಡೇರಿದೆಯಾ?. 15ನೇ ಹಣಕಾಸು ಆಯೋಗದ ಅನುದಾನದ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 448.29 ಕೋಟಿ ರೂ ಬಳಕೆ ಮಾಡಿಲ್ಲ. ಈ ಹಣ ಬಿಡುಗಡೆಯಾಗಿ ಹಲವಾರು ತಿಂಗಳೇ ಕಳೆದಿದ್ದರೂ, ಇನ್ನೂ ಪಂಚಾಯತಿಗಳಿಗೆ ಆ ಹಣ ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ದಯಾನೀಯವಾಗಿದೆ. ಗುಣಮಟ್ಟದ ಚಿಕಿತ್ಸೆ ದೊರೆಯದೆ ಬಾಣಂತಿಯರು, ಮಕ್ಕಳ ಸರಣಿ ಸಾವುಗಳು ಸಂಭವಿಸುತ್ತಿವೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳಿಲ್ಲ. 2,756 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಿದ್ದ ಮೇಲೆ ಆಡಳಿತ ಹೇಗೆ ಉತ್ತಮವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ ಎಚ್‌ಡಿಕೆ, ಸರ್ಕಾರ ಪ್ರತಿದಿನವೂ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದೆ. ಜನರಿಗೆ ಇನ್ನೂ ಎರಡು ಸಾವಿರ ರೂಪಾಯಿ ಕೊಡಲಿ, ನಮ್ಮ ಅಭ್ಯಂತವಿಲ್ಲ. ಆದರೆ, ಮಿತಿ ಮೀರಿದ ತೆರಿಗೆ ಹೇರಿಕೆ ಮಾಡುತ್ತಿದ್ದಾರೆ. ಎರಡು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಎರಡು ಸಾವಿರ ರೂಪಾಯಿ ಕೊಡಲಿಕ್ಕೆ ಇವರೇ ಬೇಕಾ?. ಬೇಕಾಬಿಟ್ಟಿಯಾಗಿ ಆ ಸಾಲ ತೀರಿಸುವವರು ಯಾರು?. ಜನ ಸಾಮಾನ್ಯರೇ ಆ ಸಾಲ ತೀರಿಸಬೇಕಲ್ವಾ ಎಂದು ಕಿಡಿಕಾರಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಇತರರಿದ್ದರು.
ಸೈನಿಕರ ಸಾವಿಗೆ ಕಂಬನಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ರಾಜ್ಯದ ಮೂವರು ಸೈನಿಕರು ಹುತಾತ್ಮರಾಗಿವುದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಂಬಿನಿ ಮಿಡಿದಿದ್ದಾರೆ. ಅಪಘಾತದಲ್ಲಿ ಸೈನಿಕರು ಸಾವನ್ನಪ್ಪಿದ ವಿಚಾರ ತಿಳಿದು ನನಗೆ ಬಹಳ ದುಃಖವಾಯಿತು. ಮೃತರಲ್ಲಿ ಮೂವರು ಕನ್ನಡಿಗರು ಇದ್ದಾರೆ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಆ ಅನಾಹುತ ಕರುಣಾಜನಕ ಘಟನೆ. ಕೇಂದ್ರ ಸರ್ಕಾರ ಆ ಕುಟುಂಬಗಳ ನೆರವಿಗೆ ನಿಲ್ಲಲಿದೆ ಎಂದು ಹೇಳಿದರು.